ಬೆಂಗಳೂರು: ಮನೆ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲಿದ್ದ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಯುವಕನೊಬ್ಬ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ನಗದು ದೋಚಿದ ಘಟನೆ ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮನೆಯ ಮಾಲೀಕರು ಕೆಲಸದ ಮಹಿಳೆಯ ಮೇಲೆ ಅಪಾರ ವಿಶ್ವಾಸ ಇಟ್ಟು ಮನೆಯ ಕೀಲಿಯನ್ನು ಆಕೆಯ ಬಳಿಯೇ ಇಡುತ್ತಿದ್ದರು. ಈ ಮಹಿಳೆಯ ಜೊತೆ ಆಕೆಯ ತಂಗಿಯ ಮಗ ಸಹ ಆಗಾಗ್ಗೆ ಮನೆಗೆ ಬರುತ್ತಿದ್ದನು. ಇದೇ ಸಂದರ್ಭವನ್ನು ಸದುಪಯೋಗಪಡಿಸಿಕೊಂಡ ಯುವಕ, ದೊಡ್ಡಮ್ಮನ ಬಳಿಯಿದ್ದ ಮನೆಯ ಕೀಲಿಯನ್ನು ಚಾಲಾಕಿತನದಿಂದ ಪಡೆದುಕೊಂಡಿದ್ದಾನೆ.
ಮಾಲೀಕರು ಇಲ್ಲದ ಸಮಯ ನೋಡಿಕೊಂಡು ಮನೆಗೆ ನುಗ್ಗಿದ ಆತ, ಕಪಾಟಿನಲ್ಲಿ ಇಡಲಾಗಿದ್ದ 241 ಗ್ರಾಂ ಚಿನ್ನಾಭರಣ, 2.8 ಕೆಜಿ ಬೆಳ್ಳಿ ಮತ್ತು 1.3 ಲಕ್ಷ ರೂಪಾಯಿ ನಗದು ಕಳವು ಮಾಡಿದ್ದಾನೆ.
ಕಳ್ಳತನದ ಬಗ್ಗೆ ಮನೆಯಲ್ಲಿ ತಿಳಿದುಬಂದ ತಕ್ಷಣ ದೂರು ದಾಖಲಾಗಿದ್ದು, ತನಿಖೆ ಕೈಗೆತ್ತಿಕೊಂಡ ಬಸವನಗುಡಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಕಳುವಾದ ಸಂಪೂರ್ಣ ಚಿನ್ನ, ಬೆಳ್ಳಿ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣವನ್ನು ಕ್ಷಿಪ್ರವಾಗಿ ಭೇದಿಸಿರುವ ಬಸವನಗುಡಿ ಪೊಲೀಸರು ಶ್ಲಾಘನೆಗೆ ಪಾತ್ರರಾಗಿದ್ದಾರೆ. ಯಾವುದೇ ವ್ಯಕ್ತಿ ಎಷ್ಟೇ ನಂಬಿಕಸ್ಥನಾಗಿದ್ದರೂ ಮನೆಯ ಕೀಲಿಗಳನ್ನು ಅವರ ಬಳಿ ಬಿಟ್ಟು ಹೋಗುವುದು ಅಪಾಯಕಾರಿಯಾಗಿದೆ ಎಂದು ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.



