ಗದಗ: ನಗರದ ಹುಡ್ಕೋ ಕಾಲೋನಿಯಲ್ಲಿ ಮನೆ ಕಳ್ಳತನದ ಘಟನೆ ಸಂಭವಿಸಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಕಾಂಗ್ರೆಸ್ ಪಕ್ಷದ ಮುಖಂಡ ಸೋಮಪ್ಪ ಲಮಾಣಿ ಎಂಬುವರ ಮನೆಗೆ ರಾಡ್‌ನಿಂದ ಸೆಂಟರ್ ಲಾಕ್ ಮುರಿದು ನುಗ್ಗಿದ ಕಳ್ಳರು, ಸುಮಾರು 30 ಗ್ರಾಂ ಬಂಗಾರದ ಆಭರಣ, ಎರಡು ಕೆಜಿ ಬೆಳ್ಳಿ ಹಾಗೂ ₹50 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.
ಕುಟುಂಬಸ್ಥರು ಮಗಳ ಭೇಟಿಗಾಗಿ ಬೆಂಗಳೂರಿಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಇಂದು ಬೆಂಗಳೂರಿನಿಂದ ಮನೆಗೆ ಮರಳಿದ ಕುಟುಂಬದವರು ಮನೆ ಬಾಗಿಲು ಒಡೆದಿರುವುದನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ಒಳಗೆ ಹೋಗಿ ನೋಡಿದಾಗ ಬೀರು ಮತ್ತು ಗೋದ್ರೆಜ್ ಲಾಕರ್ ಮುರಿದು ಚಿನ್ನ, ಬೆಳ್ಳಿ, ನಗದು ದೋಚಿರುವುದು ಬೆಳಕಿಗೆ ಬಂದಿದೆ.
ಮನೆಯ ಯಜಮಾನಿ ಕಣ್ಣೀರು ಹಾಕುತ್ತಾ, “ಎಲ್ಲವೂ ದೋಚಿದ್ದಾರೆ. ಇನ್ನೂ ಒಳಗಡೆ ಸಂಪೂರ್ಣವಾಗಿ ನೋಡಿಲ್ಲ. ಇನ್ನೇನು ದೋಚಿದ್ದಾರೆ ಗೊತ್ತಿಲ್ಲ,” ಎಂದು ದುಃಖ ವ್ಯಕ್ತಪಡಿಸಿದರು.
ಘಟನಾ ಸ್ಥಳಕ್ಕೆ ಗದಗ ಡಿವೈಎಸ್ಪಿ ಮುರ್ತಾಜ್ ಖಾದ್ರಿ, ಸಿಪಿಐ ಲಾಲಸಾಬ್ ಜೂಲಕಟ್ಟಿ ಹಾಗೂ ಪಿಎಸ್ಐ ಪವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಾಗ್ ಸ್ಕ್ವಾಡ್ ಹಾಗೂ ಸೋಕೋ ತಂಡವು ಸ್ಥಳ ಪರಿಶೀಲನೆ ನಡೆಸಿದೆ. ಪೊಲೀಸ್ ಶ್ವಾನ್ ‘ಚೇತಕ್’ ಕಳ್ಳರ ಹೆಜ್ಜೆ ಗುರುತು ಹಿಡಿದು ಸೂಚನೆ ನೀಡಿದ್ದು, ಅದರ ಆಧಾರದಲ್ಲಿ ಶೋಧ ಕಾರ್ಯ ಮುಂದುವರಿದಿದ್ದು, ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.



