ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಶ್ರೀ ಪಂಡಿತ ಪುಟ್ಟರಾಜ ಗವಾಯಿಗಳ ಆಶ್ರಮದಲ್ಲಿ ಗದಗ ಜಿಲ್ಲಾ ರೆಡ್ಡಿ ಮಹಿಳಾ ಸಮಾಜದ ವತಿಯಿಂದ ಮಹಾಶಿವರಾತ್ರಿ ಹಬ್ಬದ ಮಹತ್ವ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶಿವರಾತ್ರಿಯ ಹಿನ್ನೆಲೆಯನ್ನು ಕುರಿತು ಹಿರಿಯರಾದ ರತ್ನಾ ಸೋಮರೆಡ್ಡಿ ಮಾತನಾಡಿ, ಮಹಾಶಿವರಾತ್ರಿ ಕೇವಲ ಒಂದು ಹಬ್ಬವಲ್ಲ. ಅದು ಆತ್ಮಪರಿಶೀಲನೆ, ಉಪವಾಸ, ಜಾಗರಣೆ ಮತ್ತು ಶಿವನಾಮ ಸ್ಮರಣೆಯ ಮೂಲಕ ಮನಸ್ಸಿನ ಶುದ್ಧೀಕರಣಕ್ಕೆ ದಾರಿ ತೋರುವ ಪವಿತ್ರ ದಿನವಾಗಿದೆ. ಶಿವತತ್ವವು ತ್ಯಾಗ, ಸಮತೆ, ಸಹಿಷ್ಣುತೆ ಮತ್ತು ಶಾಂತಿಯ ಸಂಕೇತವಾಗಿದ್ದು, ಇಂದಿನ ಯುವಪೀಳಿಗೆಗೆ ನೈತಿಕ ದಾರಿದೀಪವಾಗಬಹುದು. ಶಿವರಾತ್ರಿಯ ಉಪವಾಸವು ದೇಹದ ಶುದ್ಧೀಕರಣಕ್ಕೆ ಮಾತ್ರವಲ್ಲ, ಮನೋನಿಗ್ರಹ ಮತ್ತು ಆತ್ಮಸಾಧನೆಗೆ ಸಹಾಯಕವಾಗುತ್ತದೆ ಎಂದರು.
ಆಶ್ರಮದ ಗುರುಗಳು ಶಿವರಾತ್ರಿಯ ಪೌರಾಣಿಕ ಹಿನ್ನೆಲೆ ಮತ್ತು ಅದರ ತಾತ್ವಿಕ ಅರ್ಥವನ್ನು ವಿವರಿಸಿ, ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಕಾರ್ಯಕ್ರಮದ ಅಂಗವಾಗಿ ಭಜನೆ, ಕೀರ್ತನೆ ಮತ್ತು ಶಿವನಾಮ ಸ್ಮರಣೆ ನಡೆಯಿತು.
ಕಾರ್ಯಕ್ರಮದಲ್ಲಿ ರಾಜೇಶ್ವರಿ ಶಿರೋಳ ಶಿವರಾತ್ರಿಯ ವೈಶಿಷ್ಟ್ಯತೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ರೂಪಾ ತಿರ್ಲಾಪೂರ ಕಾರ್ಯಕ್ರಮವನ್ನು ನೆರವೇರಿಸಿದರು. ವೀಣಾ ತಿರ್ಲಾಪೂರ ವಂದಿಸಿದರು.
ಕಾರ್ಯಕ್ರಮದಲ್ಲಿ ಯಶೋಧ ಗದ್ದಿಕೇರಿ, ಸುಮಾ ಶಿವನಗೌಡ, ಶೈಲಜಾ ಕವಲೂರ್, ಆಶಾ ಹೋದರ ಗೌಡರ್ ಸೇರಿದಂತೆ ರೆಡ್ಡಿ ಬಳಗದ ಮಹಿಳೆಯರು ಉಪಸ್ಥಿತರಿದ್ದರು.



