ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಯಳವತ್ತಿ ಗ್ರಾಮ ಐತಿಹಾಸಿಕ, ಧಾರ್ಮಿಕ, ಕೃಷಿ, ಶಿಕ್ಷಣ ವಿವಿಧ ರಂಗದಲ್ಲಿ ಹೆಸರಾಗಿದೆ. ಇಲ್ಲಿನ ಶ್ರೀ ಗುಂಡೇಶ್ವರ ದೇವಸ್ಥಾನ, ಕೋಟೆ ಆವರಣ ಗ್ರಾಮದ ಐತಿಹಾಸಿಕ ಶ್ರೀಮಂತಿಕೆಯನ್ನು ಸಾಕ್ಷೀಕರಿಸುತ್ತವೆ. ಗ್ರಾಮದ ಜನರ, ಭಕ್ತರ ಇಷ್ಟಾರ್ಥ ಸಿದ್ಧಿಸುವ ಶ್ರೀ ಗುಂಡೇಶ್ವರ ಎಲ್ಲರ ಆರಾಧ್ಯದೈವವಾಗಿದೆ.
ಗುಂಡೇಶ್ವರ ದೇವಸ್ಥಾನ ಅತ್ಯಂತ ಪುರಾತನ ದೇವಸ್ಥಾನ. ಆದರೆ ದೇವಾಲಯಕ್ಕೆ ಸುಣ್ಣ-ಬಣ್ಣ ಬಳಿದಿರುವುದರಿಂದ ಪುರಾತನ ಕಲ್ಲುಗಳು ಮರೆಯಾಗಿವೆ. ಇದು 11ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟ ದೇವಸ್ಥಾನ ಎಂಬುದಕ್ಕೆ ಇಲ್ಲಿನ ಶಿಲಾ ಶಾಸನಗಳು ಸಾಕ್ಷಿಯಾಗಿವೆ. ಗುಂಡಲಿಂಗ ದೇವಾಲಯದ ಆವರಣದಲ್ಲಿರುವ ಕ್ರಿ.ಶ. 1152ರ ಶಾಸನದಲ್ಲಿ ಕಲ್ಯಾಣದ ಚಾಲುಕ್ಯರ ತ್ರಿಭುವನಮಲ್ಲದೇವನ ಆಳ್ವಿಕೆಯ ಕಾಲಾವಧಿಯಲ್ಲಿ ಊರುಗಳ ಚಕ್ರವರ್ತಿ ಎನಿಸಿದ ಶ್ರೀರಾಮಸ್ವಾಮಿ ದತ್ತಿಯಾದ ಯಳವತ್ತಿ ಮಹಾ ಅಗ್ರಹಾರದ 120 ಮಹಾಜನರು ತಮ್ಮ ಕುಲದೈವರಾದ ಗುಂಡೇಶ್ವರ ದೇವರ ಪೂಜೆ ಪುನಸ್ಕಾರಗಳಿಗೆ ದೇವರಾಶಿಯತಿಪತಿಯ ಸನ್ನಿಧಿಯಲ್ಲಿ ಭೂದಾನ ಮಾಡಿದ ನಿರೂಪಣೆಯಿದೆ. ಸಾಂಗ್ಲಿ ಸಂಸ್ಥಾನಿಕರು ಆಡಳಿತ ನಡೆಸಿದ ಕ್ಷೇತ್ರವಾಗಿದ್ದು, ಇಲ್ಲಿನ ಬೃಹತ್ ಕಲ್ಲಿನ ಕೋಟೆಯನ್ನು ಪೇಶ್ವೆಯವರ ಕಾಲದಲ್ಲಿ ನಿರ್ಮಿಸಲಾಗಿದೆ.
ಧಾರವಾಡ ಜಿಲ್ಲೆ ಅಣ್ಣಿಗೇರಿಯ ಅಮೃತೇಶ್ವರ, ಯಳವತ್ತಿ ಗ್ರಾಮದ ಗುಂಡೇಶ್ವರ ಮತ್ತು ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನಗಳು ಒಂದೇ ವೇಳೆಗೆ ನಿರ್ಮಿಸಲ್ಪಟ್ಟಿವೆ ಎಂಬ ಐತಿಹ್ಯವೂ ಇದೆ. ಈ ಮೂರೂ ದೇವಸ್ಥಾನಗಳು ಚಾಲುಕ್ಯ ಶಿಲ್ಪಕಲೆ ಹೊಂದಿರುವುದು ಪರಶಿವನೇ ಇಲ್ಲಿನ ಅಧಿದೈವ.
ಒಮ್ಮೆ ಸಂತ ಶಿಶುನಾಳದ ಶರೀಫರು ನವಲಗುಂದದ ನಾಗಲಿಂಗ ಸ್ವಾಮಿಗಳೊಡನೆ ತೆರಳುವ ಸಂದರ್ಭದಲ್ಲಿ ಯಳವತ್ತಿಯ ಗುಂಡೇಶ್ವರ ದೇವಸ್ಥಾನದಲ್ಲಿ ತಂಗುತ್ತಾರೆ. ಈ ಮಹಾತ್ಮರು ತಮ್ಮ ದಿವ್ಯದೃಷ್ಟಿಯಿಂದ ದೇವಸ್ಥಾನದ ಮಹತ್ವ ಅರಿತು ಹಾವು ಕಡಿದವರಾಗಲಿ ಅಥವಾ ವಿಷ ಬಾಧಿತರಾಗಲಿ ದೇವಸ್ಥಾನದ ಹೊಸ್ತಿಲನ್ನು ದಾಟಿಕೊಂಡು ಹೋದರೆ ಅವರು ವಿಷ ಬಾಧೆಯಿಂದ ಪಾರಾಗುತ್ತಾರೆ ಎಂದು ನೆರೆದಿದ್ದ ಭಕ್ತರಿಗೆ ತಿಳಿಸುತ್ತಾರೆ. ಅಂದಿನಿಂದ ಇಂದಿನವರೆಗೆ ಹಾವು ಕಡಿದವರು ಮತ್ತು ವಿಷ ಬಾಧಿತರು ದೇವಸ್ಥಾನದಲ್ಲಿನ ಶಿವಲಿಂಗದ ದರ್ಶನ ಮಾಡಿ ಸಂಕಷ್ಟದಿಂದ ಪಾರಾಗುತ್ತಾರೆ.
ಪ್ರತಿವರ್ಷ ಮೇ ತಿಂಗಳು ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನಮಠದ ಜಾತ್ರೆ ನಡೆದ ಹತ್ತು ದಿನಗಳ ನಂತರ ಗುಂಡೇಶ್ವರ ದೇವರ ಜಾತ್ರೆ ವೈಭವದಿಂದ ನಡೆಯುತ್ತದೆ.
ನಮ್ಮೂರಿನ ಗುಂಡೇಶ್ವರ ದೇವರ ದೇವಸ್ಥಾನ ಪುರಾತನವಾಗಿದ್ದು, ಇಲ್ಲಿ ಶರೀಫ ಸಾಹೇಬರು ಮತ್ತು ನವಲಗುಂದದ ನಾಗಲಿಂಗಪ್ಪ ಸ್ವಾಮೀಜಿ ಪವಾಡ ಮೆರೆದಿದ್ದಾರೆ. ಈಗಲೂ ಹಾವು ಕಡಿಸಿಕೊಂಡವರು ದೇವಸ್ಥಾನಕ್ಕೆ ಬಂದು ಬಾವಿಯಲ್ಲಿ ಸ್ನಾನ ಮಾಡಿ ದರ್ಶನ ಪಡೆದರೆ ಗುಣಮುಖರಾಗುತ್ತಾರೆ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.



