ಮಂಡ್ಯ:– ತಾಲೂಕಿನ ಬಸರಾಳು ಸಮೀಪದ ಕಾರೆಕಟ್ಟೆ ಗ್ರಾಮದಲ್ಲಿ ಭಾರೀ ದುರಂತ ಸಂಭವಿಸಿದೆ.
ಕಾರಕಟ್ಟೆ ಬಳಿಯ ಕೀರ್ತಿ ಕೆಮಿಕಲ್ಸ್ ಇಂಡಸ್ಟ್ರೀಸ್‌ನಲ್ಲಿ ರಾಸಾಯನಿಕ ಸಂಗ್ರಹಕ್ಕಾಗಿ ಬಳಸುತ್ತಿದ್ದ ಬೃಹತ್ ಟ್ಯಾಂಕ್ ಸ್ಫೋಟಗೊಂಡಿದೆ.
ಘಟನೆಯಲ್ಲಿ ಬಿಹಾರ ಮೂಲದ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಫೋಟದ ತೀವ್ರತೆಗೆ ಮೃತದೇಹಗಳು ಛಿದ್ರ ಛಿದ್ರಗೊಂಡಿರುವುದಾಗಿ ತಿಳಿದುಬಂದಿದೆ. ಸ್ಥಳದಲ್ಲಿದ್ದ ಇನ್ನು ಮೂವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವನ ಕೈ ಸಂಪೂರ್ಣ ಕಟ್ ಆಗಿರುವ ಮಾಹಿತಿ ಲಭ್ಯವಾಗಿದೆ. ಗಾಯಾಳುಗಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ದುರ್ಘಟನೆ ಬಳಿಕ ಕಾರ್ಖಾನೆ ಮಾಲೀಕ ಸ್ಥಳದಿಂದ ನಾಪತ್ತೆಯಾಗಿರುವ ಮಾಹಿತಿ ದೊರೆತಿದೆ. ಸ್ಥಳಕ್ಕೆ ಬಸರಾಳು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತರು ಹಾಗೂ ಗಾಯಾಳುಗಳ ಪೂರ್ಣ ವಿವರ ಇನ್ನಷ್ಟೇ ತಿಳಿಯಬೇಕಿದೆ.
ಈ ಸಂಬಂಧ ಬಸರಾಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.



