ಬೆಂಗಳೂರು: ಎಲ್ಲಾ ಧರ್ಮದವರೂ ದೇಶದಲ್ಲಿರುವಾಗ ‘ವಂದೇ ಮಾತರಂ’ ರಾಷ್ಟ್ರಗೀತೆ ಆಗಲು ಸಾಧ್ಯವಿಲ್ಲ ಎಂದು ಎಂಎಲ್ಸಿ ಬಿ.ಕೆ. ಹರಿಪ್ರಸಾದ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
‘ವಂದೇ ಮಾತರಂ’ ಹೇಳುವ ಮೂಲಕ ರಾಷ್ಟ್ರಗೀತೆಯನ್ನು ಡೀ-ಪ್ರಮೋಟ್ ಮಾಡಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಆರ್‌ಎಸ್‌ಎಸ್‌ನ ಗೋಳವಲ್ಕರ್ ಅವರು ರಾಷ್ಟ್ರಗೀತೆಯ ಬಗ್ಗೆ ಅಪಸ್ವರ ಎತ್ತಿದ್ದರು. ಒಂದು ದಿನವೂ ರಾಷ್ಟ್ರಗೀತೆಯನ್ನು ಅವರ ಸಂಘದಲ್ಲಿ ಹಾಡಿಲ್ಲ. ಅದಕ್ಕಾಗಿ ವಂದೇ ಮಾತರಂ ಅನ್ನು ಎಲ್ಲೆಡೆ ಕಡ್ಡಾಯಗೊಳಿಸಲಾಗುತ್ತಿದೆ ಎಂದು ಹೇಳಿದರು.
“ಮೊದಲು ವಂದೇ ಮಾತರಂ, ನಂತರ ರಾಷ್ಟ್ರಗೀತೆ ಹಾಡುವುದು ರಾಷ್ಟ್ರಗೀತೆಗೆ ಅಪಮಾನ ಮಾಡಿದಂತಾಗಿದೆ. ಬಿಜೆಪಿ ಸರ್ಕಾರ ನಮ್ಮ ಶಿಷ್ಟಾಚಾರಕ್ಕೆ ಧಕ್ಕೆ ತರುತ್ತಿದೆ. ಬಿಜೆಪಿಯವರು ರಾಷ್ಟ್ರಗೀತೆಯ ವಿರುದ್ಧವೇ ನಡೆಯುತ್ತಿದ್ದಾರೆ,” ಎಂದು ಹರಿಪ್ರಸಾದ್ ಕಿಡಿಕಾರಿದರು.
‘ವಂದೇ ಮಾತರಂ’ ಬೆಂಗಾಲ್ ಪ್ರಾಂತ್ಯದ ರಾಷ್ಟ್ರಗೀತೆ ಆಗಿತ್ತೇ ವಿನಃ ಇಡೀ ದೇಶದ ರಾಷ್ಟ್ರಗೀತೆ ಆಗಿರಲಿಲ್ಲ. ಬೆಂಗಾಲ್ ಚುನಾವಣೆ ಹಿನ್ನೆಲೆ ಇದನ್ನು ಕಡ್ಡಾಯಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು.
“ವಂದೇ ಮಾತರಂನಲ್ಲಿ ದೇವರ ಹೆಸರೂ ಇದೆ. ಎಲ್ಲಾ ಧರ್ಮದವರು ಇರುವ ದೇಶದಲ್ಲಿ ಇದು ರಾಷ್ಟ್ರಗೀತೆ ಆಗಲು ಸಾಧ್ಯವಿಲ್ಲ. ಕೋಮು ಭಾವನೆ ಕೆರಳಿಸಲು ಇದನ್ನು ಬಳಸಲಾಗುತ್ತಿದೆ. ಇದು ಚುನಾವಣಾ ಗಿಮಿಕ್ ಮಾತ್ರ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.



