ಬೆಂಗಳೂರು: ಜೈಲಿನಲ್ಲಿದ್ದರೂ ನಟ ದರ್ಶನ್ ಜನ್ಮದಿನ ಸಂಭ್ರಮ ಅಭಿಮಾನಿಗಳಲ್ಲಿ ಕಡಿಮೆಯಾಗಿಲ್ಲ. ಆರ್ಆರ್ ನಗರದ ನಿವಾಸದ ಬಳಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುತ್ತಿರುವ ಹಿನ್ನೆಲೆ ಪೊಲೀಸರು ಭದ್ರತಾ ಕ್ರಮಗಳನ್ನು ಬಿಗಿಗೊಳಿಸಿದ್ದಾರೆ.
ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ಅಭಿಮಾನಿಗಳ ಪ್ರವೇಶ ತಡೆಯಲಾಗಿದ್ದು, ಈ ವೇಳೆ ಒಬ್ಬ ಅಭಿಮಾನಿ ಅತಿರೇಕ ತೋರಿದ ಕಾರಣ ಪೊಲೀಸ್ ಅಧಿಕಾರಿಯೊಬ್ಬರು ಕಪಾಳಮೋಕ್ಷ ಮಾಡಿದ್ದಾರೆ. ಘಟನೆ ಕೆಲಕಾಲ ಉದ್ವಿಗ್ನತೆಗೆ ಕಾರಣವಾದರೂ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಜೈಲುವಾಸದಲ್ಲಿರುವ ದರ್ಶನ್ ಈ ಬಾರಿ ಹುಟ್ಟುಹಬ್ಬವನ್ನು ಕಾರಾಗೃಹದಲ್ಲೇ ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಅಭಿಮಾನಿಗಳು ರಾಜ್ಯಾದ್ಯಂತ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.
ಪತ್ನಿ ವಿಜಯಲಕ್ಷ್ಮೀ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಫೋಟೋ ಹಂಚಿಕೊಂಡು ಶುಭಾಶಯ ಕೋರಿದ್ದಾರೆ. ಜೊತೆಗೆ ರಕ್ಷಿತಾ ಪ್ರೇಮ್, ಅನುಷಾ ರೈ, ಯಶಸ್ ಸೂರ್ಯ, ಚಿಕ್ಕಣ್ಣ, ಅಭಿಷೇಕ್ ಅಂಬರೀಶ್, ಧನ್ವೀರ್ ಗೌಡ ಹಾಗೂ ರಚಿತಾ ರಾಮ್ ಸೇರಿದಂತೆ ಹಲವು ಕಲಾವಿದರು ಶುಭಾಶಯ ತಿಳಿಸಿದ್ದಾರೆ.
ಜೈಲಿನಲ್ಲಿದ್ದರೂ ಅಭಿಮಾನಿಗಳ ಉತ್ಸಾಹ ಕಡಿಮೆಯಾಗದಿರುವುದು ಕನ್ನಡ ಚಿತ್ರರಂಗದಲ್ಲಿ ದರ್ಶನ್ಗೆ ಇರುವ ಭಾರೀ ಜನಪ್ರಿಯತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.



