ವಿಜಯಸಾಕ್ಷಿ ಸುದ್ದಿ, ರೋಣ: ಹಿಂದಿನ ಬಿಜೆಪಿ ಸರ್ಕಾರ ಚುನಾವಣೆಯ ಸಂದರ್ಭದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದು ಘೋಷಿಸಿ ಮಾಡಿಟ್ಟಿರುವ 73 ಸಾವಿರ ಕೋಟಿ ರೂಗಳ ಸಾಲವನ್ನು ಈಗಿನ ಕಾಂಗ್ರೆಸ್ ಸರ್ಕಾರ ಭರ್ತಿ ಮಾಡಬೇಕಿದೆ ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಶಾಸಕರಾದ ಜಿ.ಎಸ್. ಪಾಟೀಲ ಹೇಳಿದರು.
ಅವರು ಸೋಮವಾರ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಕೆರೆ ಹೂಳೆತ್ತುವ ಕಾಮಗಾರಿ, ಸಿಸಿ ರಸ್ತೆ ನಿರ್ಮಾಣ, ಗ್ರಂಥಾಲಯ ಕಟ್ಟಡ ನಿರ್ಮಾಣ, ಹೊಸಳ್ಳಿ ರಸ್ತೆ ಸುಧಾರಣೆ, ಸಂಪರ್ಕ ರಸ್ತೆ ಸುಧಾರಣೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಚುನಾವಣೆ ಪೂರ್ವದಲ್ಲಿ ನೀಡಿರುವ ಐದು ಭರವಸೆಗಳನ್ನು ಈಡೇರಿಸುವ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಮುಖ್ಯವಾಗಿ ಬಿಜೆಪಿಯವರು ಮಾಡಿರುವ ಸಾಲದ ಹಣವನ್ನು ಸರ್ಕಾರ ತೀರಿಸುವ ಮೂಲಕ ರಾಜ್ಯದಲ್ಲಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡು ಪ್ರಗತಿಯತ್ತ ಸಾಗುತ್ತಿದೆ. ಸರ್ಕಾರದ ಬಳಿ ಹಣವಿಲ್ಲದಿದ್ದರೆ ಹೊಸಪೇಟಿಯಲ್ಲಿ 1.30 ಲಕ್ಷ, ಹಾವೇರಿ ಜಿಲ್ಲೆಯಲ್ಲಿ 1 ಲಕ್ಷ ಜನರಿಗೆ ಹಕ್ಕುಪತ್ರ ನೀಡಲು ಸಾಧ್ಯವಿತ್ತೇ? ಹೊಸಳ್ಳಿ ಗ್ರಾಮಕ್ಕೆ 1 ಕೋಟಿಗೂ ಅಧಿಕ ಅನುದಾನವನ್ನು ನೀಡಲು ಸಾಧ್ಯವಿತ್ತೇ ಎನ್ನುವುದನ್ನು ಜನರು ಅರಿಯಬೇಕು. ಮತಕ್ಷೇತ್ರದಲ್ಲಿ 200 ಕೋಟಿ ರೂಗಳಿಗೂ ಅಧಿಕ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯಮಂತ್ರಿಗಳು ಬಂದು ಚಾಲನೆ ನೀಡಿರುವುದು ಎಲ್ಲರಿಗೂ ತಿಳಿದ ವಿಷಯ. ಸರ್ಕಾರದ ಖಜಾನೆಯಲ್ಲಿ ಹಣವಿಲ್ಲದಿದ್ದರೆ ರೋಣ ಮತಕ್ಷೇತ್ರಕ್ಕೆ 200 ಕೋಟಿ ರೂ ಅನುದಾನವನ್ನು ತರಲಾಗುತ್ತಿತ್ತೇ ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದರು.
ಕೃಷ್ಣಾ ಬಿ ಸ್ಕೀಂ ಮೂಲಕ ಗಜೇಂದ್ರಗಡ ತಾಲೂಕಿನ 19 ಕೆರೆಗಳನ್ನು ಭರ್ತಿ ಮಾಡಲು ಈಗಾಗಲೇ ಕ್ರಿಯಾಯೋಜನೆಯನ್ನು ರೂಪಿಸಲಾಗಿದ್ದು, ಈ ಬಜೆಟ್‌ನಲ್ಲಿ ಘೋಷಣೆಯಾಗಿ ಅನುದಾನವೂ ಬರಲಿದೆ. ಈ ಯೋಜನೆಯಲ್ಲಿ ಹೊಸಳ್ಳಿ ಗ್ರಾಮದ ಕೆರೆಯನ್ನು ಸೇರಿಸಿಕೊಂಡು ಕೃಷ್ಣಾ ನದಿಯ ನೀರಿನಿಂದ ಭರ್ತಿ ಮಾಡಲಾಗುವುದು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು 8 ಲಕ್ಷ ರೂಗಳ ವೆಚ್ಚದಲ್ಲಿ ಕೆರೆಯ ಹೂಳೆತ್ತುವ ಕಾರ್ಯವನ್ನು ಮಾಡುತ್ತಿರುವುದು ಹೆಮ್ಮೆಯ ವಿಚಾರ. ಗ್ರಾಮಸ್ಥರು ಸಹ ಸಾಮೂಹಿಕವಾಗಿ ಪಾಲ್ಗೊಂಡು ಅವರಿಗೆ ಸಹಕಾರ ನೀಡಬೇಕು ಮತ್ತು ಅಂತರ್ಜಲ ಹೆಚ್ಚಿಸಲು ಕೆರೆಯನ್ನು ರಕ್ಷಿಸಬೇಕು. ಅಭಿವೃದ್ಧಿ ಕಾರ್ಯಗಳಿಗೂ ಸಹಕಾರ ಅಗತ್ಯ ಎಂದರು.
ಸಾನ್ನಿಧ್ಯವನ್ನು ಗುರುಪಾದ ಶ್ರೀಗಳು ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಶೆಟ್ಟರ, ನ್ಯಾಯವಾದಿ ವಿ.ಆರ್. ಗುಡಿಸಾಗರ, ಎಪಿಎಂಸಿ ಮಾಜಿ ಅಧ್ಯಕ್ಷ ಪಿ.ಬಿ. ಅಳಗವಾಡಿ, ತಾ.ಪಂ ಮಾಜಿ ಉಪಾಧ್ಯಕ್ಷ ಪ್ರಭು ಮೇಟಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಂಗಪ್ಪ ಮೆಣಸಿನಕಾಯಿ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಯಚ್ಚರಗೌಡ ಗೋವಿಂದಗೌಡ, ಸದಸ್ಯ ಬಸವರಾಜ ನವಲಗುಂದ, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಯೂಸುಪ್ ಇಟಗಿ, ವಿ.ಬಿ. ಸೋಮನಕಟ್ಟಿಮಠ, ವಿ.ಬಿ. ಪಸಾರದ, ಕಾಶೀಮಸಾಬ ಪಿಂಜಾರ, ಬಿ.ಎಸ್. ರಡ್ಡೇರ ಸೇರಿದಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಜಿಲ್ಲೆಯಲ್ಲಿ 26 ಶುದ್ಧಗಂಗಾ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ 26 ಕೆರೆಗಳ ಹೂಳು ತೆಗೆಯುವ ಕಾರ್ಯವನ್ನು ಮಾಡಲಾಗಿದ್ದು, ಸಾರ್ವಜನಿಕರಿಗೆ ಉಪಯುಕ್ತವಾಗುವ ಕೆಲಸಗಳಿದ್ದಲ್ಲಿ ಅವುಗಳಿಗೆ ಸಹಕಾರ ನೀಡಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸದಾಕಾಲ ಸಿದ್ಧವಿದೆ.
-
ಕೇಶವ ದೇವಾಂಗ.
ಧ.ಗ್ರಾ.ಸಂ ಯೋಜನಾಧಿಕಾರಿ, ಗದಗ.



