ವಿಜಯಸಾಕ್ಷಿ ಸುದ್ದಿ, ಗದಗ: ಜನಮುಖಿ ಹಾಗೂ ಸಮಾಜಮುಖಿಯಾಗಿ ಕಾರ್ಯ ಮಾಡುವ ವ್ಯಕ್ತಿ ವೈಯಕ್ತಿಕವಾಗಿ ಸಂತೃಪ್ತಿಯ ಭಾವವನ್ನು ಹೊಂದಿದ್ದರೆ, ಅಂತಹ ವ್ಯಕ್ತಿ ಸಮಾಜದಲ್ಲಿ ಜನಮನ್ನಣೆಗೆ ಪಾತ್ರನಾಗುತ್ತಾನೆ ಎಂದು ಗದುಗಿನ ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಡಾ. ಶಿವಪ್ಪ ಕುರಿ ಹೇಳಿದರು.
ಅವರು ಬುಧವಾರ ಬೆಟಗೇರಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಭಾಂಗಣದಲ್ಲಿ ಆರ್.ಆರ್. ಕಾಶಪ್ಪನವರ ಅವರು ಸೇವಾ ನಿವೃತ್ತರಾದ ನಿಮಿತ್ತ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರಿ ಸೇವೆಯಲ್ಲಿರುವವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುವ ಮೂಲಕ ಆತ್ಮತೃಪ್ತಿಯನ್ನು ಹೊಂದಬೇಕು. ಕರ್ತವ್ಯದೊಂದಿಗೆ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲೂ ಆಸಕ್ತಿ ಹೊಂದಿ ಕಾರ್ಯ ನಿರ್ವಹಿಸಬೇಕು. ಆರ್.ಆರ್. ಕಾಶಪ್ಪನವರ ಆರಂಭದಲ್ಲಿ ಇಲ್ಲಿ ಸೇವೆ ಸಲ್ಲಿಸಿ ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾದವರು. ಅವರಿನ್ನು ಸಂಪೂರ್ಣವಾಗಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವಂತಾಗಲಿ ಎಂದರು.
ಪ್ರೊ. ಪಿ. ಕೇಶವ, ಡಾ. ವಿರೂಪಾಕ್ಷಿ ಮುಳಗುಂದ, ಡಾ. ಕಸ್ತೂರಿ ದಳವಾಯಿ, ಡಾ. ಹನಮಂತಪ್ಪ ಕಲ್ಮನಿ, ಪ್ರೊ. ಖಲೀಲಅಹ್ಮದ್ ಚಿಕ್ಕೇರೂರ, ಆರ್.ಆರ್. ಕಾಶಪ್ಪನವರರ ಕರ್ತವ್ಯ ನಿರ್ವಹಣೆ, ವ್ಯಕ್ತಿತ್ವವನ್ನು ಬಣ್ಣಿಸಿದರು.
ಆರ್.ಆರ್. ಕಾಶಪ್ಪನವರ ಹಾಗೂ ಸುಮಿತ್ರಾ ದಂಪತಿಯನ್ನು ಕಾಲೇಜಿನ ಆಡಳಿತ ಸಿಬ್ಬಂದಿ ವರ್ಗದವರು ಹಾಗೂ ಗೆಳೆಯರ ಬಳಗದವರು ಸನ್ಮಾನಿಸಿ ಗೌರವಿಸಿದರು. ಕವಿತಾ ಜಂಗವಾಡ ಪ್ರಾರ್ಥಿಸಿದರು, ಅಶ್ವಿನಿ ಉಪ್ಪಿನ ಸ್ವಾಗತಿಸಿ ಪರಿಚಯಿಸಿದರು. ಡಾ. ಕಸ್ತೂರಿ ದಳವಾಯಿ ನಿರೂಪಿಸಿದರು. ಜ್ಯೋತಿ ಬೋಳಣ್ಣವರ ವಂದಿಸಿದರು.



