ಬೆಂಗಳೂರು: ಕಮಿಷನ್ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ. ಅದನ್ನು ಸಂಪೂರ್ಣವಾಗಿ ನಿರ್ಮೂಲ ಮಾಡುವುದು ಕಷ್ಟ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರಿಂದ ಕಮಿಷನ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, “ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ದಾರಿ ಹುಡುಕಬೇಕು. ಮುಖ್ಯಮಂತ್ರಿಗಳು ಇದ್ದಾರೆ, ಲೋಕಾಯುಕ್ತ ಇದೆ. ಅವರ ಗಮನಕ್ಕೆ ತರಬಹುದು. ಆದರೆ ಇಷ್ಟು ಪ್ರಮಾಣದಲ್ಲಿ ಬಾಕಿ ಬಿದ್ದಿರುವುದಕ್ಕೆ ಕಾರಣವೇನು ಎಂಬುದರ ಮೇಲೆ ಚಿಂತನೆ ಅಗತ್ಯ ಎಂದರು.
ಬಜೆಟ್ ಬೆಂಬಲವಿಲ್ಲದೆ ಹಿಂದಿನ ಬಿಜೆಪಿ ಸರ್ಕಾರ ಟೆಂಡರ್ ನೀಡಿದ ಕಾರಣವೇ ಇಂದಿನ ಪರಿಸ್ಥಿತಿ ಉಂಟಾಗಿದೆ ಎಂದು ಅವರು ಆರೋಪಿಸಿದರು. ಆ ಸಮಯದಲ್ಲಿ ಟೆಂಡರ್ ನೀಡದೇ ಇದ್ದಿದ್ದರೆ ಈ ಪರಿಸ್ಥಿತಿ ಬರ್ತಿರಲಿಲ್ಲ. ಕೆಲಸಗಳು ನಡೆದಿವೆ, ಪಾವತಿಗೆ ಸಮಯ ಬೇಕು. ವಿಶೇಷವಾಗಿ ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆಯಲ್ಲಿ ಹೆಚ್ಚು ಬಾಕಿ ಇದೆ ಎಂದು ತಿಳಿಸಿದರು.
ಕಾಮಗಾರಿ ನಿಲ್ಲಿಸಲು ಸಾಧ್ಯವಿಲ್ಲ. ಗುತ್ತಿಗೆದಾರರು ತಮ್ಮ ಅನುಕೂಲ ಇರುವ ಕಡೆ ಟೆಂಡರ್ ಹಾಕುತ್ತಾರೆ. ನಮ್ಮಲ್ಲಿರುವ ಬಜೆಟ್‌ಗೆ ಸರಿಹೊಂದುವಂತೆ ಕೆಲಸಗಳನ್ನು ಸಮತೋಲನಗೊಳಿಸುತ್ತಿದ್ದೇವೆ. ನಾವು ಹೊಸ ಕೆಲಸಗಳಿಗೆ ಅನುಮೋದನೆ ನೀಡಿಲ್ಲ, ಹಳೆಯ ಬಾಕಿಗಳನ್ನು ಸಮತೋಲನಗೊಳಿಸುತ್ತಿದ್ದೇವೆ ಎಂದು ಹೇಳಿದರು.



