ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಾಸಕ ಡಾ. ಚಂದ್ರು ಲಮಾಣಿ ಒಡೆತನದ ಬಾಲಾಜಿ ಆಸ್ಪತ್ರೆಯಲ್ಲೇ ಗುತ್ತಿಗೆದಾರ ವಿಜಯ ಪೂಜಾರ ಅವರು ಶಾಸಕರ ಸಮ್ಮುಖದಲ್ಲೇ ಅವರ ಆಪ್ತ ಸಹಾಯಕ ಮಂಜು ವಾಲ್ಮೀಕಿಗೆ 5 ಲಕ್ಷ ರೂಪಾಯಿ ನಗದನ್ನು ನೀಡುವುದನ್ನು ಮೊದಲೇ ಹೊಂಚು ಹಾಕಿ ಕುಳಿತಿದ್ದ ಧಾರವಾಡ ಲೋಕಾಯುಕ್ತ ಎಸ್.ಪಿ. ಸಿದ್ದಲಿಂಗಪ್ಪ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿತು.
ಲೋಕಾಯುಕ್ತ ಪೊಲೀಸರನ್ನು ಕಂಡ ತಕ್ಷಣ ಗಾಬರಿಗೊಂಡ ಸಹಾಯಕ ಮಂಜು ವಾಲ್ಮೀಕಿ ತನ್ನ ಬಳಿಯಿದ್ದ ಹಣದ ಕಟ್ಟೆಯನ್ನು ಆಸ್ಪತ್ರೆಯ ಹಿಂಭಾಗದ ರಸ್ತೆ ಬದಿ ಎಸೆದು ಸ್ಥಳದಿಂದ ಓಡಿಹೋಗಲು ಯತ್ನಿಸಿದಾಗ ಲೋಕಾಯುಕ್ತ ಸಿಬ್ಬಂದಿ ಆತನನ್ನು ಬೆನ್ನಟ್ಟಿ ಹಿಡಿದು ವಶಕ್ಕೆ ಪಡೆದಿದ್ದಾರೆ. ಎಸೆಯಲ್ಪಟ್ಟ ನಗದನ್ನು ಪೊಲೀಸರು ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ.
ರಾತ್ರಿ 9 ಗಂಟೆಯಾದರೂ ಲೋಕಾಯುಕ್ತರು ಶಾಸಕರ ವಿಚಾರಣೆ ಮುಂದುವರೆಸಿದ್ದರು. ಆಸ್ಪತ್ರೆಯ ಮುಂದೆ ಕಾರ್ಯಕರ್ತರ ಹೈಡ್ರಾಮಾ ನಡೆದೇ ಇತ್ತು. ಪೊಲೀಸರು ಪರಿಸ್ಥಿತಿ ನಿಯಂತ್ರಿಸುವಲ್ಲಿ ಪೇಚಿಗೆ ಸಿಲುಕಿದ್ದರು.



