ಬೆಂಗಳೂರು: ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿ ನಾಯಕರು, ಇದೀಗ ತಮ್ಮದೇ ಶಾಸಕ ಚಂದ್ರು ಲಮಾಣಿ ವಿರುದ್ಧದ ಲಂಚ ಪ್ರಕರಣದಲ್ಲಿ ಏನು ಹೇಳುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಟೀಕೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್‌ನವರನ್ನೇಕೆ ಕೇಳ್ತೀರಾ? ಹೋಗಿ ಬಿಜೆಪಿಯವರನ್ನೇ ಕೇಳಿ” ಎಂದು ಪ್ರಶ್ನಿಸಿದರು. ನಿನ್ನೆ ಬಿಜೆಪಿ ನಾಯಕರು “ಮಾಹಿತಿ ಇಲ್ಲ, ತರಿಸಿಕೊಂಡು ನೋಡ್ತೀನಿ” ಎಂದು ಹೇಳಿದ್ದನ್ನು ಉಲ್ಲೇಖಿಸಿದ ಅವರು, “ಇವಾಗ 24 ಗಂಟೆ ಆಯ್ತಲ್ಲ, ಮಾತಾಡಲಿ” ಎಂದು ಸವಾಲು ಹಾಕಿದರು.
ಎಐ ಶೃಂಗಸಭೆ ಸಂದರ್ಭದಲ್ಲಿ ಕಾರ್ಯಕರ್ತರ ಪ್ರತಿಭಟನೆ ಕುರಿತು ಬಿಜೆಪಿ ನಾಯಕರು ತಕ್ಷಣ ಸುದ್ದಿಗೋಷ್ಠಿ ನಡೆಸಿದ್ದರು. “ದೆಹಲಿಯಿಂದ ಮಾಹಿತಿ ಬಂತು ಅಂತ ಹೇಳ್ತಾರೆ. ಇವಾಗ ಶಿರಹಟ್ಟಿಯಿಂದ ಮಾಹಿತಿ ಬರಲ್ವಾ?” ಎಂದು ವ್ಯಂಗ್ಯವಾಡಿದರು. “ರಾಹುಲ್ ಗಾಂಧಿ ಟೀಕಿಸಲು ದೆಹಲಿಯಿಂದ ಮಾಹಿತಿ ಬರುತ್ತದೆ, ಆದರೆ ತಮ್ಮದೇ ಶಾಸಕರ ಬಗ್ಗೆ ಯಾಕೆ ಇನ್ನೂ ಮಾಹಿತಿ ಬಂದಿಲ್ಲ?” ಎಂದು ಪ್ರಶ್ನಿಸಿದರು.
ವಿಜಯೇಂದ್ರ, ಅಶೋಕ್, ಛಲವಾದಿ ಅವರೇ ಸ್ಪಷ್ಟನೆ ನೀಡಲಿ ಎಂದು ಅವರು ಆಗ್ರಹಿಸಿದರು. “ವಿಧಾನಸೌಧದಲ್ಲಿ ಆಹೋರಾತ್ರಿ ಧರಣಿ ಮಾಡಿದ್ರಲ್ಲ, ಈಗ ಯಾರಪ್ಪ ರಾಜೀನಾಮೆ ಕೊಡ್ತೀರಾ?” ಎಂದು ತೀವ್ರವಾಗಿ ಪ್ರಶ್ನಿಸಿದರು.
ಇದು ಕಾಂಗ್ರೆಸ್ ಷಡ್ಯಂತ್ರ ಎಂದು ಹೇಳುವವರಿಗೆ “ಸ್ವಲ್ಪ ಕಾಮನ್‌ಸೆನ್ಸ್ ಇರಲಿ, ಇದು ಲೋಕಾಯುಕ್ತ ಟ್ರ್ಯಾಪ್” ಎಂದು ಖರ್ಗೆ ತಿರುಗೇಟು ನೀಡಿದರು. ಬಿಜೆಪಿ ನಾಯಕರು ಈ ಕುರಿತು ಸ್ಪಷ್ಟವಾಗಿ ಮಾತನಾಡಿದರೆ ಉತ್ತಮ ಎಂದು ಅವರು ಹೇಳಿದ್ದಾರೆ.



