ಬೆಂಗಳೂರು: ನಗರದ ಜೆ.ಪಿ.ನಗರದ ಪಬ್‌ವೊಂದರಲ್ಲಿ ಕುಡಿದ ಮತ್ತಿನಲ್ಲಿ ಅಬಕಾರಿ ಇನ್‌ಸ್ಪೆಕ್ಟರ್‌ರೊಬ್ಬರು ಗಲಾಟೆ ನಡೆಸಿದ ಘಟನೆ ನಡೆದಿದೆ.
ಸಬ್ ಡಿವಿಷನ್-11ರಲ್ಲಿ ಕಾರ್ಯನಿರ್ವಹಿಸುತ್ತಿರುವ ಮಲ್ಲಪ್ಪ ಎಸ್. ಕುಂದಗೋಳ ಎಂಬ ಅಬಕಾರಿ ಇನ್‌ಸ್ಪೆಕ್ಟರ್, ಸರ್ಕಾರಿ ಗುರುತಿನ ಚೀಟಿ ಹಾಕಿಕೊಂಡೇ ಪಬ್‌ಗೆ ತೆರಳಿದ್ದರು ಎನ್ನಲಾಗಿದೆ. ಬಳಿಕ ಕಂಠಪೂರ್ತಿ ಮದ್ಯ ಸೇವಿಸಿ ಅಲ್ಲಿದ್ದವರಿಗೆ ಅವಾಜ್ ಹಾಕಿ ರಾದ್ಧಾಂತ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಪಬ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿ ಜತೆಗೂ ಇನ್‌ಸ್ಪೆಕ್ಟರ್ ಕಿರಿಕ್ ಮಾಡಿಕೊಂಡಿದ್ದು, ಇದನ್ನು ಪ್ರಶ್ನಿಸಿದ ಮ್ಯಾನೇಜರ್‌ಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಇನ್‌ಸ್ಪೆಕ್ಟರ್ ಗಲಾಟೆ ನಡೆಸಿದ ದೃಶ್ಯಗಳು ಪಬ್‌ನಲ್ಲಿದ್ದವರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಇದೀಗ ವೀಡಿಯೋ ವೈರಲ್ ಆಗಿದೆ. ಪಬ್‌ನಲ್ಲಿ ಜನರು ಗುಂಪುಗೂಡುತ್ತಿದ್ದಂತೆ ಅಧಿಕಾರಿ ಸ್ಥಳದಿಂದ ತೆರಳಿದ್ದಾರೆ.
ಸರ್ಕಾರಿ ಗುರುತಿನ ಚೀಟಿ ತೆಗೆಯದೇ ಮದ್ಯದ ಅಮಲಿನಲ್ಲಿ ವರ್ತಿಸಿದ ಆರೋಪದ ಹಿನ್ನೆಲೆಯಲ್ಲಿ ಘಟನೆ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.



