ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ನಮೂನೆಗಳನ್ನು ಹಿಂದಿರುಗಿಸುವ ಅವಧಿಯನ್ನು ಚುನಾವಣಾ ಆಯೋಗ ವಿಸ್ತರಿಸಿದೆ.
ಈ ಮೊದಲು ಜುಲೈ ಅಂತ್ಯದವರೆಗೆ ಬೂತ್ ಮಟ್ಟದ ಅಧಿಕಾರಿಗಳಿಗೆ ನಮೂನೆ ಸಂಗ್ರಹಿಸಲು ಅವಕಾಶ ನೀಡಲಾಗಿತ್ತು. ಇದೀಗ ಈ ಅವಧಿಯನ್ನು ಆಗಸ್ಟ್ 8ರವರೆಗೆ ವಿಸ್ತರಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಅದರಂತೆ BLOಗಳು ಮನೆ ಮನೆಗೆ ತೆರಳಿ ಮತದಾರರಿಂದ ನಮೂನೆಗಳನ್ನು ಸಂಗ್ರಹಿಸಬಹುದಾಗಿದೆ.
ಈ ಕುರಿತು ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಮತ್ತಷ್ಟು ವೇಗ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಈಗಾಗಲೇ 5.27 ಕೋಟಿಗೂ ಹೆಚ್ಚು ಎನ್ಯೂಮರೇಷನ್ ಫಾರ್ಮ್‌ಗಳನ್ನು ವಿತರಿಸಲಾಗಿದ್ದು, 13 ಜಿಲ್ಲೆಗಳಲ್ಲಿ ಶೇ.100ರಷ್ಟು ಫಾರ್ಮ್ ವಿತರಣೆ ಪೂರ್ಣಗೊಂಡಿದೆ. ಇದುವರೆಗೆ 1 ಕೋಟಿ 99 ಲಕ್ಷ 51 ಸಾವಿರ 635 ಫಾರ್ಮ್‌ಗಳ ಡಿಜಿಟಲೀಕರಣ ಪೂರ್ಣಗೊಂಡಿದ್ದು, ಸುಮಾರು ಶೇ.40ರಷ್ಟು ಡಿಜಿಟಲೀಕರಣ ಕಾರ್ಯ ಮುಗಿದಿದೆ ಎಂದು ಮಾಹಿತಿ ನೀಡಿದ್ದಾರೆ.
ಯಾದಗಿರಿ, ರಾಯಚೂರು, ಕೊಪ್ಪಳ, ಉತ್ತರ ಕನ್ನಡ, ಹಾವೇರಿ, ವಿಜಯನಗರ, ದಾವಣಗೆರೆ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಹಾಸನ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಶೇ.100ರಷ್ಟು ಫಾರ್ಮ್ ವಿತರಣೆ ಪೂರ್ಣಗೊಂಡಿದೆ.
ಬೆಂಗಳೂರು ವ್ಯಾಪ್ತಿಯಲ್ಲಿ ಒಟ್ಟು 1 ಕೋಟಿ 3 ಲಕ್ಷ 88 ಸಾವಿರ 363 ಮತದಾರರ ಪೈಕಿ 81 ಲಕ್ಷ 30 ಸಾವಿರ 826 ಮಂದಿಗೆ ಎನ್ಯೂಮರೇಷನ್ ಫಾರ್ಮ್ ವಿತರಿಸಲಾಗಿದೆ ಎಂದು ತಿಳಿಸಿದರು.
ವಾರಾಂತ್ಯದಲ್ಲಿ ವಿಶೇಷ ಅಭಿಯಾನ
ಉದ್ಯೋಗ ಹಾಗೂ ವ್ಯಾಪಾರದ ಕಾರಣಗಳಿಂದ ವಾರದ ದಿನಗಳಲ್ಲಿ ಮನೆಗಳಲ್ಲಿ ಲಭ್ಯವಿರದ ಮತದಾರರ ಅನುಕೂಲಕ್ಕಾಗಿ ಶನಿವಾರ ಮತ್ತು ಭಾನುವಾರ ರಾಜ್ಯಾದ್ಯಂತ ವಿಶೇಷ ಅಭಿಯಾನ ನಡೆಸಲಾಗುವುದು. ನಗರ ಪ್ರದೇಶಗಳಲ್ಲೂ ಇದೇ ಮಾದರಿಯಲ್ಲಿ ಅಭಿಯಾನ ನಡೆಯಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.



