ಮೈಸೂರು: ಜನಸುರಕ್ಷತೆಯನ್ನು ಪ್ರಾಥಮಿಕವಾಗಿ ಪರಿಗಣಿಸಿ ಮೈಸೂರು ನಗರ ಪೊಲೀಸರು ಹೀಲಿಯಂ ಅನಿಲ ಬಳಸಿ ಬಲೂನ್ ತುಂಬುವುದು, ಮಾರಾಟ ಮತ್ತು ಸಂಗ್ರಹಣೆಗೆ ಸಂಪೂರ್ಣ ನಿಷೇಧ ಹೇರಿದ್ದಾರೆ. ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಅವರು BNSS-2023 ಸೆಕ್ಷನ್ 152 ಅಡಿಯಲ್ಲಿ ಈ ಆದೇಶ ಹೊರಡಿಸಿದ್ದಾರೆ.
ಜನಸಂದಣಿ ಪ್ರದೇಶಗಳಲ್ಲಿ ಅನಧಿಕೃತ ಹಾಗೂ ಅಪ್ರಮಾಣಿತ ಅನಿಲ ಸಿಲಿಂಡರ್ ಬಳಕೆ ಭಾರೀ ಅಪಾಯಕ್ಕೆ ಕಾರಣವಾಗುತ್ತಿದೆ ಎಂಬ ಅಂಶ ತನಿಖೆಗಳಲ್ಲಿ ಬಹಿರಂಗವಾಗಿದೆ. ವಿಶೇಷವಾಗಿ ಹಬ್ಬ–ಜಾತ್ರೆ, ಪ್ರವಾಸಿ ತಾಣ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಿಯಂತ್ರಣವಿಲ್ಲದ ಬಳಕೆ ಅಪಘಾತದ ಸಾಧ್ಯತೆಯನ್ನು ಹೆಚ್ಚಿಸಿದೆ.
ಡಿಸೆಂಬರ್ 25 2025ರಂದು ಮೈಸೂರು ಅರಮನೆ ಸಮೀಪ ನಡೆದ ಸಿಲಿಂಡರ್ ಸ್ಫೋಟದಲ್ಲಿ 3 ಮಂದಿ ಸಾವನ್ನಪ್ಪಿದ ಘಟನೆ ಈ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ. ಬಲೂನ್ ಮಾರಾಟಗಾರ ಸಲೀಂ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡ ಮಂಜುಳಾ ಹಾಗೂ ಲಕ್ಷ್ಮಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.
ಆದೇಶದ ಪ್ರಕಾರ:
-
ಸಾರ್ವಜನಿಕ ಸ್ಥಳಗಳಲ್ಲಿ ಹೀಲಿಯಂ ಬಲೂನ್ ಸಂಪೂರ್ಣ ನಿಷೇಧ
-
ಸುರಕ್ಷತಾ ಪ್ರಮಾಣಪತ್ರವಿಲ್ಲದೆ ಸಿಲಿಂಡರ್ ಬಳಕೆ ಮಾಡಿದರೆ ಕಾನೂನು ಕ್ರಮ
-
ವೈದ್ಯಕೀಯ ಮತ್ತು ವೈಜ್ಞಾನಿಕ ಬಳಕೆಗಳಿಗೆ ಮಾತ್ರ ವಿನಾಯಿತಿ
-
ಅನುಮತಿಯಿಲ್ಲದೆ ಸಭೆ–ಸಮಾರಂಭಗಳಲ್ಲಿ ಬಳಕೆ ಅಕ್ರಮ
ಉಲ್ಲಂಘನೆ ಮಾಡಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಸಾರ್ವಜನಿಕರು ಮತ್ತು ಆಯೋಜಕರು ಸುರಕ್ಷತೆಗೆ ಮೊದಲ ಆದ್ಯತೆ ನೀಡಿ, ಅನುಮತಿಯಿಲ್ಲದೆ ಹೀಲಿಯಂ ಬಳಕೆ ಮಾಡಿಸಬಾರದು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.



