ಚಿಕ್ಕಮಗಳೂರು: ಕಾಡಾನೆ ದಾಳಿಗೆ ಮಹಿಳೆ ಬಲಿಯಾದ ಘಟನೆ ಕಾಫಿನಾಡಿನಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಪ್ರಕರಣದ ವಿರುದ್ಧ ನಡೆದ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಮತ್ತಷ್ಟು ಉದ್ವಿಗ್ನತೆ ಸೃಷ್ಟಿಸಿದೆ. ಇದರ ಖಂಡನೆಗಾಗಿ ಸೋಮವಾರ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಸಂಪೂರ್ಣ ಬಂದ್ ಆಚರಿಸಲಾಯಿತು.
ಶೃಂಗೇರಿ, ಎನ್ ಆರ್ ಪುರ, ಕೊಪ್ಪ ತಾಲೂಕು ಹಾಗೂ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿ ವ್ಯಾಪ್ತಿಯಲ್ಲಿ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿದ್ದು, ರಸ್ತೆಗಳು ಬಿಕೋ ಎನ್ನುತ್ತಿದ್ದವು. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಾಣಿಜ್ಯ ಮತ್ತು ಸಾರ್ವಜನಿಕ ಚಟುವಟಿಕೆಗಳು ಸ್ಥಗಿತಗೊಂಡವು.
ಸರ್ಕಾರ ಮತ್ತು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರ ಮೇಲೆ ಲಾಠಿಚಾರ್ಜ್ ನಡೆಸಿದ ಕ್ರಮವನ್ನು ಖಂಡಿಸಿ ಬಂದ್ಗೆ ಕರೆ ನೀಡಲಾಗಿತ್ತು. ರೈತ ಸಂಘಟನೆಗಳು ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಬಂದ್ಗೆ ಬೆಂಬಲ ಸೂಚಿಸಿದ್ದವು.
ನಾಗರಿಕ ಹಿತ ರಕ್ಷಣಾ ವೇದಿಕೆ, ರೈತ ಒಕ್ಕೂಟ, ಆಟೋ ಚಾಲಕರು ಮತ್ತು ಮಾಲೀಕರ ಸಂಘಗಳು ಸೇರಿದಂತೆ ವಿವಿಧ ಸಂಘಟನೆಗಳು ಬಂದ್ಗೆ ಕೈಜೋಡಿಸಿವೆ. ಬಿಜೆಪಿ ಪಕ್ಷವೂ ಬಂದ್ಗೆ ಬೆಂಬಲ ವ್ಯಕ್ತಪಡಿಸಿದೆ. ಕಾಡಾನೆ ಹಾವಳಿ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.



