ಬೆಂಗಳೂರು: ಸ್ನೇಹಿತನ ಬ್ಯಾಂಕ್ ಖಾತೆಯನ್ನು ದುರುಪಯೋಗಪಡಿಸಿಕೊಂಡು ಬರೋಬ್ಬರಿ 7 ಕೋಟಿ ರೂ. ಸೈಬರ್ ವಂಚನೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಆಯುಷ್ ಎಂಬಾತ ತನ್ನ ಬ್ಯಾಂಕ್ ಖಾತೆ ಬ್ಲಾಕ್ ಆಗಿದೆ ಎಂದು ಹೇಳಿ,
ವಿದ್ಯಾರ್ಥಿಯೊಬ್ಬರಿಂದ ಖಾತೆ ವಿವರಗಳನ್ನು ಪಡೆದುಕೊಂಡಿದ್ದಾನೆ. ಸ್ನೇಹಿತನ ಮೇಲೆ ನಂಬಿಕೆ ಇಟ್ಟು ವಿದ್ಯಾರ್ಥಿ ತನ್ನ ಪಾಸ್ಬುಕ್, ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಸಿಮ್ ಕಾರ್ಡ್ ನೀಡಿದ್ದಾನೆ ಎಂದು ತಿಳಿದುಬಂದಿದೆ.
ನಂತರ ವಿದ್ಯಾರ್ಥಿಗೆ ಬ್ಯಾಂಕ್ನಿಂದ ಕರೆ ಬಂದು, ಅವರ ಖಾತೆಯ ಮೂಲಕ ಸೈಬರ್ ವಂಚನೆ ನಡೆದಿದ್ದು 7 ಕೋಟಿ ರೂ. ಹಣ ವರ್ಗಾವಣೆಯಾಗಿದೆ ಎಂದು ಮಾಹಿತಿ ನೀಡಲಾಗಿದೆ. ತಕ್ಷಣವೇ ಬ್ಯಾಂಕ್ ಅಧಿಕಾರಿಗಳು ವಿದ್ಯಾರ್ಥಿಯ ಖಾತೆಯನ್ನು ಬ್ಲಾಕ್ ಮಾಡಿದ್ದಾರೆ.
ಈ ಸಂಬಂಧ ವಂಚನೆಗೊಳಗಾದ ವಿದ್ಯಾರ್ಥಿ ಉತ್ತರ ವಿಭಾಗ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಆಯುಷ್ ಹಾಗೂ ಇತರರು ಸೇರಿಕೊಂಡು ಈ ವಂಚನೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ವಂಚನೆಗೊಳಗಾದ ವಿದ್ಯಾರ್ಥಿ ಮತ್ತು ಆಯುಷ್ ಕಳೆದ ಒಂದು ವರ್ಷದಿಂದ ಸ್ನೇಹಿತರಾಗಿದ್ದರು ಎಂದು ತಿಳಿದುಬಂದಿದೆ.



