ಗುರುಗ್ರಾಮ: ಲಿವ್-ಇನ್ ಸಂಬಂಧದ ಹೆಸರಿನಲ್ಲಿ ಮದುವೆಯ ಆಮಿಷವೊಡ್ಡಿ ಯುವತಿಯನ್ನು ಅಮಾನವೀಯವಾಗಿ ಹಿಂಸಿಸಿದ ಅಘಾತಕಾರಿ ಘಟನೆ ಹರಿಯಾಣದ ಗುರುಗ್ರಾಮ್ ನಲ್ಲಿ ಬೆಳಕಿಗೆ ಬಂದಿದೆ. 19 ವರ್ಷದ ಬಿ.ಎಸ್ಸಿ ವಿದ್ಯಾರ್ಥಿನಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.
ತ್ರಿಪುರಾ ಮೂಲದ ವಿದ್ಯಾರ್ಥಿನಿ ಗುರುಗ್ರಾಮದ ಸೆಕ್ಟರ್ 69ರ ಪಿಜಿಯಲ್ಲಿ ವಾಸವಿದ್ದು, ಬಯೋಟೆಕ್ನಾಲಜಿ ಅಭ್ಯಾಸ ಮಾಡುತ್ತಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಆ್ಯಪ್ ಮೂಲಕ ದೆಹಲಿಯ ನರೇಲಾ ಮೂಲದ ಶಿವಂ ಎಂಬಾತನ ಪರಿಚಯವಾಗಿತ್ತು. ಮದುವೆಯಾಗುವುದಾಗಿ ನಂಬಿಸಿ, ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿ, ಬಳಿಕ ಫ್ಲಾಟ್‌ನಲ್ಲಿ ಲಿವ್-ಇನ್ ಸಂಬಂಧ ಆರಂಭಿಸಿದ್ದನು.
ಇಬ್ಬರ ನಡುವೆ ಹೊಂದಾಣಿಕೆ ಸಮಸ್ಯೆ, ಸಂದೇಹಗಳು ಹೆಚ್ಚಾಗುತ್ತಿದ್ದಂತೆ ಶಿವಂ ಯುವತಿಯ ಮೇಲೆ ಸತತ ದೈಹಿಕ ದೌರ್ಜನ್ಯ ಎಸಗುತ್ತಿದ್ದನು ಎನ್ನಲಾಗಿದೆ. ಫೆಬ್ರವರಿ 16ರಂದು ಕ್ರೌರ್ಯ ಮಿತಿಮೀರಿದ್ದು, ಯುವತಿಯ ತಲೆಯನ್ನು ಗೋಡೆಗೆ ಜಜ್ಜಿ, ಸ್ಟೀಲ್ ಬಾಟಲಿ ಹಾಗೂ ಮಣ್ಣಿನ ಮಡಕೆಯಿಂದ ಹಲ್ಲೆ ನಡೆಸಿದ್ದಾನೆ.
ಅಷ್ಟೇ ಅಲ್ಲದೆ, ಖಾಸಗಿ ಅಂಗಕ್ಕೆ ಸ್ಯಾನಿಟೈಸರ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ಈ ಭೀಕರ ಹಲ್ಲೆಯ ವಿಡಿಯೋವನ್ನು ಸಹ ಆರೋಪಿ ಚಿತ್ರೀಕರಿಸಿದ್ದಾನೆ. ಕಾಲುಗಳಿಗೆ ಚಾಕುವಿನಿಂದ ಇರಿದು, “ಇನ್ನು ಮುಂದೆ ತಾಯಿಯಾಗಲು ಅಥವಾ ನಡೆಯಲು ಸಾಧ್ಯವಾಗದಂತೆ ಮಾಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಎರಡು ದಿನಗಳ ಕಾಲ ಚಿತ್ರಹಿಂಸೆ ಅನುಭವಿಸಿದ ಯುವತಿ, ಫೆಬ್ರವರಿ 18ರಂದು ಆರೋಪಿಯ ಫೋನಿನಿಂದಲೇ ತಾಯಿಗೆ ಸ್ಥಳೀಯ ಭಾಷೆಯಲ್ಲಿ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ವಿಷಯ ತಿಳಿದ ತಾಯಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಯುವತಿಯನ್ನು ರಕ್ಷಿಸಿದ್ದಾರೆ.
ಸದ್ಯ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.



