ವಿಜಯಸಾಕ್ಷಿ ಸುದ್ದಿ, ಗದಗ: ಗ್ರಾಮೀಣ ಜನರಿಗೆ ನೆರವಾಗುವ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಯೋಜನೆಗಳನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖಾಂತರ ರೂಪಿಸಲಾಗಿದೆ. ಈ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರಿಗೆ ಸಾಲ ಸೌಲಭ್ಯ ನೀಡುವುದು, ಹೆಚ್ಚು ಠೇವಣಿಗಳನ್ನು ಸಂಗ್ರಹಿಸುವ ಮೂಲಕ ರೈತರಿಗೆ ರಸಗೊಬ್ಬರಗಳನ್ನು, ಕೃಷಿ ಉಪಕರಣಗಳನ್ನು ವಿತರಿಸುವುದು, ಹೀಗೆ ಹತ್ತು ಹಲವಾರು ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ನಮ್ಮ ಸಹಕಾರ ಸಂಘಗಳು ಮುನ್ನಡೆಯುತ್ತಿವೆ ಎಂದು ಕೆ.ಸಿ.ಸಿ ಬ್ಯಾಂಕ್ ಧಾರವಾಡ ಹಾಗೂ ಗದಗ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಎಂ.ಎಫ್. ಕಲಗುಡಿ ಹೇಳಿದರು.
ಸಹಕಾರ ಇಲಾಖೆ ಗದಗ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಗದಗ ಜಿಲ್ಲಾ ಸಹಕಾರ ಯೂನಿಯನ್, ಕೆ.ಸಿ.ಸಿ ಬ್ಯಾಂಕ್ ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗದಗ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಸಿ.ಎಂ. ಪಾಟೀಲ ಮಾತನಾಡುತ್ತಾ, ಗ್ರಾಮೀಣ ಜನರಿಗೆ ಅವರ ಮನೆ ಬಾಗಿಲಿಗೆ ಕಡಿಮೆ ವೆಚ್ಚದ ಸೇವೆಗಳು, ಹೆಚ್ಚಿನ ವ್ಯಾಪ್ತಿ ಮತ್ತು ಸಾಲ ವಿತರಣೆಯ ಸುಧಾರಣೆಗಾಗಿ ಸಹಕಾರಿ ಸಂಘ ಇತರ ಸರ್ಕಾರಿ ಮತ್ತು ಹಣಕಾಸು ಸಂಸ್ಥೆಗಳಲ್ಲಿ ಕಾರ್ಯವಿಧಾನ, ಹೊಸ ವ್ಯವಹಾರಗಳು ಮತ್ತು ಆದಾಯ ಉತ್ಪಾದನೆಯ ಅವಕಾಶಗಳನ್ನು ಕಲ್ಪಿಸುವುದು ಮತ್ತು ಬದಲಾವಣೆಯನ್ನು ತರುವುದು ಈ ತರಬೇತಿಯ ಉದ್ದೇಶವಾಗಿದೆ ಎಂದು ಹೇಳಿದರು.
ಕೃಷಿ ಅಧಿಕಾರಿಗಳಾದ ಚೈತ್ರಾ ಬಿ.ಎಂ, ಸಂಜೀವಕುಮಾರ ನೆಗಳೂರು ಮಾತನಾಡಿದರು. ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕಿ ಎಸ್.ಎಸ್. ಕಬಾಡೆ, ಸಹಾಯಕ ನಿಬಂಧಕಿ ಪುಷ್ಪಾ ಕೆ. ಕಡಿವಾಳ, ಶಿರಹಟ್ಟಿ ಸಹಕಾರ ಅಭಿವೃದ್ಧಿ ಅಧಿಕಾರಿ ಕೆ.ಸಿ. ಕೂಸನೂರಮಠ, ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿಯ ಮಾರಾಟಾಧಿಕಾರಿ ಬಿ.ಆರ್. ನಿಡಗುಂದಿ, ಪ್ರಶಾಂತ ಮುಧೋಳ, ಕೆ.ಸಿ.ಸಿ. ಬ್ಯಾಂಕ್‌ನ ಎಸ್.ಎಂ. ಚಿಕ್ಕಮಠ, ಡಿ.ಬಿ. ದೊಕ್ಕಣ್ಣವರ, ಕೆ.ಸಿ.ಸಿ ಬ್ಯಾಂಕ್ ನಿರೀಕ್ಷಕ ಎ.ಎ. ಶಾಬಾದಿ, ಸುನಿಲಕುಮಾರ ಚಳಗೇರಿ, ಸುರೇಶಕುಮಾರ ಎಸ್ ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ಮೇಘನಾ ನಾಡಗೇರ, ಬಸವರಾಜ ಎಂ. ಮುಚ್ಚಕಣ್ಣವರ, ಪ್ರಮೋದ ಕುಸುಬಿ, ಪ್ರಕಾಶ ಬೇಲಿ ಉಪನ್ಯಾಸ ನೀಡಿದರು. ಎಸ್.ವ್ಹಿ. ಗರ್ಜಪ್ಪನವರ ಪ್ರಾರ್ಥಿಸಿದರು. ಗದಗ ಜಿಲ್ಲಾ ಸಹಕಾರ ಯೂನಿಯನ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ಎಸ್. ಕರಿಯಪ್ಪನವರ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ರಶೀದಾಬಾನು ಸಿ. ಯಲಿಗಾರ ವಂದಿಸಿದರು.



