ಬೆಂಗಳೂರು: ಸಿಜೆ ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹೊರಬಂದಿದೆ. ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥರಾಗಿದ್ದ ರಾಯ್ ಅವರ ಸಾವಿಗೆ ಬರೋಬ್ಬರಿ 500 ಕೋಟಿ ರೂಪಾಯಿ ಹವಾಲಾ ವ್ಯವಹಾರ ಕಾರಣ ಎನ್ನುವ ಶಂಕೆ ವ್ಯಕ್ತವಾಗಿದೆ.
ಹವಾಲಾ ಹಣದ ಲೆಕ್ಕ ನೀಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದ ರಾಯ್, ಐಟಿ ಇಲಾಖೆಯ ತನಿಖೆಯ ಒತ್ತಡಕ್ಕೆ ಒಳಗಾಗಿದ್ದರು ಎಂದು ಮೂಲಗಳು ತಿಳಿಸಿವೆ. ಕೇರಳದ ಕೊಚ್ಚಿ ಪ್ರಾಜೆಕ್ಟ್ ಹಿನ್ನೆಲೆ ಡಿಸೆಂಬರ್‌ನಲ್ಲೇ ಐಟಿ ಇಲಾಖೆ 500 ಕೋಟಿ ರೂಪಾಯಿ ವ್ಯವಹಾರದ ಬಗ್ಗೆ ವಿವರ ಕೇಳಿತ್ತು ಎನ್ನಲಾಗಿದೆ.
ಈ ಹಿನ್ನೆಲೆ ರಾಯ್ ದುಬೈಯಿಂದ ಭಾರತಕ್ಕೆ ಮರಳುವುದನ್ನು ವಿಳಂಬಗೊಳಿಸಿದ್ದರೆಂದು ತಿಳಿದುಬಂದಿದೆ. ಐಟಿ ದಾಳಿಯನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದರೂ, ನಂತರ ತಮ್ಮ ಪಾರ್ಟ್ನರ್ ಮತ್ತು ಸಿಎ ಸಲಹೆ ಮೇರೆಗೆ ಅರ್ಜಿಯನ್ನು ವಾಪಸ್ ಪಡೆದಿದ್ದರು. ಭಾರತಕ್ಕೆ ವಾಪಸ್ ಬಂದ ಬಳಿಕ 500 ಕೋಟಿ ರೂ. ಮೂಲ ಮತ್ತು ಲೆಕ್ಕದ ಕುರಿತು ಐಟಿ ಅಧಿಕಾರಿಗಳು ಅನೇಕ ಪ್ರಶ್ನೆಗಳನ್ನು ಕೇಳಿದ್ದರು.
ಈ ಒತ್ತಡದಿಂದ ರಾಯ್ ಮಾನಸಿಕವಾಗಿ ಕುಗ್ಗಿಹೋಗಿದ್ದರು ಎನ್ನಲಾಗುತ್ತಿದೆ. ಆತ್ಮಹತ್ಯೆ ದಿನ ಐಟಿ ಅಧಿಕಾರಿಗಳಿಗೆ ಉತ್ತರಿಸುವುದಾಗಿ ಹೇಳಿದ್ದರೂ, ಮಾನಸಿಕ ಖಿನ್ನತೆಗಾಗಿ ಬಳಸುತ್ತಿದ್ದ ಔಷಧಿಯನ್ನು ಸೇವಿಸಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಸದ್ಯ 500 ಕೋಟಿ ಹವಾಲಾ ಹಣದ ಮೂಲ, ಅದರ ಹಾದಿ ಹಾಗೂ ಯಾರಿಗೆ ಸಂಬಂಧಪಟ್ಟದ್ದು ಎಂಬುದು ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ.



