ನವದೆಹಲಿ: ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ತೀರ್ಪುಗಳು ಹಾಗೂ ಜಾಮೀನು ಆದೇಶಗಳು ವಿಳಂಬವಾಗುತ್ತಿರುವ ವಿಚಾರಕ್ಕೆ ಗಂಭೀರವಾಗಿ ಸ್ಪಂದಿಸಿರುವ ಸುಪ್ರೀಂಕೋರ್ಟ್, ಎಲ್ಲಾ ಹೈಕೋರ್ಟ್‌ಗಳಿಗೆ ಮಹತ್ವದ ನಿರ್ದೇಶನಗಳನ್ನು ನೀಡಿದೆ. ತೀರ್ಪು ವಿಳಂಬವಾದರೆ ದಾವೆದಾರರಿಗೆ ತುಂಬಲಾರದ ನಷ್ಟ ಉಂಟಾಗುತ್ತದೆ ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಸಂವಿಧಾನದ 142ನೇ ವಿಧಿಯಡಿ ವಿಶೇಷ ಅಧಿಕಾರ ಬಳಸಿ ಈ ಆದೇಶ ಹೊರಡಿಸಿದೆ.
ಮೂರು ತಿಂಗಳೊಳಗೆ ತೀರ್ಪು ಪ್ರಕಟ ಕಡ್ಡಾಯ
ಯಾವುದೇ ಪ್ರಕರಣದ ವಿಚಾರಣೆ ಪೂರ್ಣಗೊಂಡು ಆದೇಶ ಕಾಯ್ದಿರಿಸಿದ ದಿನಾಂಕದಿಂದ ಗರಿಷ್ಠ ಮೂರು ತಿಂಗಳೊಳಗೆ ಅಂತಿಮ ತೀರ್ಪು ಪ್ರಕಟಿಸಬೇಕು ಎಂದು ಹೈಕೋರ್ಟ್‌ಗಳಿಗೆ ಸುಪ್ರೀಂಕೋರ್ಟ್ ಸೂಚಿಸಿದೆ.
ಜಾಮೀನು ಅರ್ಜಿಗಳಿಗೆ ತ್ವರಿತ ನಿರ್ಧಾರ
ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಜಾಮೀನು ಅರ್ಜಿಗಳ ವಿಚಾರದಲ್ಲಿ ವಿಳಂಬವಾಗಬಾರದು ಎಂದು ಕೋರ್ಟ್ ತಿಳಿಸಿದೆ. ಜಾಮೀನು ಆದೇಶಗಳನ್ನು ಸಾಧ್ಯವಾದರೆ ಅದೇ ದಿನ ಪ್ರಕಟಿಸಬೇಕು. ಒಂದು ವೇಳೆ ಆದೇಶ ಕಾಯ್ದಿರಿಸಿದರೆ ಮರುದಿನವೇ ಪ್ರಕಟಿಸಿ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ.
ಜೈಲಿನಿಂದ ತಕ್ಷಣ ಬಿಡುಗಡೆಗೆ ಸೂಚನೆ
ಜಾಮೀನು ಅಥವಾ ಶಿಕ್ಷೆ ಅಮಾನತು ಆದೇಶ ಹೊರಬಿದ್ದ ಕೂಡಲೇ ಅದರ ಮಾಹಿತಿಯನ್ನು ಜೈಲು ಅಧಿಕಾರಿಗಳಿಗೆ ತಲುಪಿಸಬೇಕು. ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸಿ ಕೈದಿಗಳನ್ನು ಅದೇ ದಿನ ಅಥವಾ ಗರಿಷ್ಠ ಮರುದಿನ ಬಿಡುಗಡೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
24 ಗಂಟೆಯೊಳಗೆ ತೀರ್ಪು ವೆಬ್‌ಸೈಟ್‌ಗೆ ಅಪ್‌ಲೋಡ್
ಹೈಕೋರ್ಟ್‌ಗಳು ನೀಡುವ ಎಲ್ಲಾ ತೀರ್ಪುಗಳನ್ನು ಪ್ರಕಟಿಸಿದ 24 ಗಂಟೆಯೊಳಗೆ ಅಧಿಕೃತ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುವುದು ಕಡ್ಡಾಯ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಜಾರ್ಖಂಡ್ ಹೈಕೋರ್ಟ್ ಪ್ರಕರಣದ ವೇಳೆ ಆದೇಶ
ಜಾರ್ಖಂಡ್ ಹೈಕೋರ್ಟ್‌ನಲ್ಲಿ ತೀರ್ಪುಗಳು ದೀರ್ಘಕಾಲ ವಿಳಂಬವಾಗುತ್ತಿರುವ ಕುರಿತು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ಮಹತ್ವದ ಆದೇಶ ನೀಡಿದೆ.
ತೀರ್ಪಿನ ಕಾರ್ಯಕಾರಿ ಭಾಗ ಪ್ರಕಟಿಸುವ ದಿನಾಂಕವನ್ನೇ ಅಧಿಕೃತ ತೀರ್ಪಿನ ದಿನಾಂಕ ಎಂದು ಪರಿಗಣಿಸಲಾಗುವುದು ಎಂದು ಕೋರ್ಟ್ ತಿಳಿಸಿದೆ.
ನ್ಯಾಯದಾನ ವೇಗಗೊಳಿಸುವ ಉದ್ದೇಶ
“ಹೈಕೋರ್ಟ್‌ಗಳು ಸಾವಿರಾರು ಜನರಿಗೆ ನ್ಯಾಯದ ನಿರೀಕ್ಷೆಯ ಕೇಂದ್ರಗಳಾಗಿವೆ. ಸಮಯಕ್ಕೆ ಸರಿಯಾಗಿ ತೀರ್ಪು ನೀಡುವುದು ಅತ್ಯಂತ ಅಗತ್ಯ. ಈ ನಿಯಮಗಳು ಯಾರನ್ನೂ ಗುರಿಯಾಗಿಸಿಕೊಂಡಿಲ್ಲ. ನ್ಯಾಯದಾನ ಪ್ರಕ್ರಿಯೆ ಇನ್ನಷ್ಟು ವೇಗವಾಗಿ ನಡೆಯಬೇಕೆಂಬ ಉದ್ದೇಶದಿಂದ ತರಲಾಗಿದೆ” ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಇದೇ ವೇಳೆ, ಕೆಳ ನ್ಯಾಯಾಲಯಗಳ ಜಾಮೀನು ಆದೇಶಗಳ ಮಾಹಿತಿಯನ್ನು ಕೂಡ ತಕ್ಷಣ ಸಂಬಂಧಿತ ಅಧಿಕಾರಿಗಳಿಗೆ ತಲುಪಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕೋರ್ಟ್ ಸೂಚಿಸಿದೆ.



