ತುಮಕೂರು: “ನೀನೇ ಖುಷಿಯಾಗಿರು, ನಾನು ಪ್ರಪಂಚನೇ ಬಿಟ್ಟು ಹೋಗ್ತಿದಿನಿ” ಎಂದು ಮೊಬೈಲ್‌ನಲ್ಲಿ ಸ್ಟೇಟಸ್ ಹಾಕಿ ವಿದ್ಯಾರ್ಥಿಯೊಬ್ಬ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ತುರುವೇಕೆರೆ ಪಟ್ಟಣದಲ್ಲಿ ನಡೆದಿದೆ. ತುರುವೇಕೆರೆ ತಾಲ್ಲೂಕಿನ ಕೊಂಡಜ್ಜಿ ಬಳಿಯ ಗೋಪ್ಪೆನಹಳ್ಳಿ ಗ್ರಾಮದ ಧನುಷ್ (19) ಮೃತ ವಿದ್ಯಾರ್ಥಿ. ಎರಡನೇ ವರ್ಷದ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.
ಬುಧವಾರ (ಫೆ.25) ಬೆಳಿಗ್ಗೆ ಕಾಲೇಜಿಗೆ ಹೋಗುತ್ತೇನೆಂದು ಹೇಳಿ ಮನೆಯಿಂದ ಹೊರಟಿದ್ದ ಧನುಷ್, ಸಂಜೆಯಾದರೂ ಮನೆಗೆ ಮರಳಿರಲಿಲ್ಲ. ಪೋಷಕರು ಕರೆ ಮಾಡಿದರೂ ಮೊಬೈಲ್ ಸ್ವೀಕರಿಸಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಎಲ್ಲೆಡೆ ಹುಡುಕಾಟ ಆರಂಭಿಸಿದರು.
ಹುಡುಕಾಟದ ವೇಳೆ ಡಿಪ್ಲೋಮಾ ಕಾಲೇಜಿನ ಹಿಂಭಾಗದಲ್ಲಿರುವ ಕಟ್ಟೆ ಬಳಿ ಧನುಷ್ ಬ್ಯಾಗ್, ಚಪ್ಪಲಿ ಮತ್ತು ಮೊಬೈಲ್ ಪತ್ತೆಯಾಗಿದೆ. ಜೊತೆಗೆ ಆತ್ಮಹತ್ಯೆಗೆ ಮುನ್ನ ಮೊಬೈಲ್‌ನಲ್ಲಿ ಸ್ಟೇಟಸ್ ಹಾಕಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಪೋಷಕರು ತುರುವೇಕೆರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ನೀರಿನ ಕಟ್ಟೆಯಲ್ಲಿ ಶೋಧ ಕಾರ್ಯ ನಡೆಸಿ ವಿದ್ಯಾರ್ಥಿ ಧನುಷ್ ಮೃತದೇಹವನ್ನು ಪತ್ತೆಹಚ್ಚಿದರು. ಬಳಿಕ ಮೃತದೇಹವನ್ನು ಹೊರತೆಗೆದು ತುರುವೇಕೆರೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.



