ತುಮಕೂರು: 120 ಅಡಿ ಎತ್ತರದ ವಿದ್ಯುತ್ ಹೈ ಟೆನ್ಷನ್ ಕಂಬ ಏರಿ ರೈತನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಬಿ.ಕೆ. ಹಳ್ಳಿ–ದಳವೆಹಳ್ಳಿ ರಸ್ತೆಯಲ್ಲಿ ನಡೆದಿದೆ. ಅಗ್ನಿಶಾಮಕ ದಳ ಹಾಗೂ ಪೊಲೀಸರು ಸುಮಾರು ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ರೈತನನ್ನು ರಕ್ಷಿಸಿದ್ದಾರೆ.
ಬಿ.ಕೆ. ಹಳ್ಳಿ ಗ್ರಾಮದ ಗೋಪಾಲ್ (53) ಆತ್ಮಹತ್ಯೆಗೆ ಯತ್ನಿಸಿದ ರೈತ. ಮದ್ಯ ಸೇವಿಸಿದ ಸ್ಥಿತಿಯಲ್ಲಿ ವಿದ್ಯುತ್ ಹೈ ಟೆನ್ಷನ್ ಕಂಬ ಏರಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳೀಯರು ಈ ದೃಶ್ಯ ಗಮನಿಸಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಹರಸಾಹಸ ಪಟ್ಟು ಕಾರ್ಯಾಚರಣೆ ನಡೆಸಿದರು. ಸುಮಾರು ಮೂರು ಗಂಟೆಗಳ ಪ್ರಯತ್ನದ ಬಳಿಕ ಯಾವುದೇ ಅನಾಹುತವಾಗದಂತೆ ಗೋಪಾಲ್ ಅವರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು.
ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಗೋಪಾಲ್ ತಿಳಿಸಿದ್ದಾರೆ. ಜಮೀನಿಗೆ ಬೋರ್‌ವೆಲ್ ಕೊರೆಸಲು ಹಾಗೂ ಮಗಳ ಮದುವೆಗಾಗಿ ಸುಮಾರು 6 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದಾಗಿ ಹೇಳಿದ್ದಾರೆ. ಸಾಲಗಾರರ ಒತ್ತಡ ಹೆಚ್ಚಾಗಿದ್ದರಿಂದ ಮನನೊಂದು ಮದ್ಯ ಸೇವಿಸಿ ಕಂಬ ಏರಿದ್ದಾಗಿ ತಿಳಿಸಿದ್ದಾರೆ. ಸದ್ಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಗೋಪಾಲ್ ಅವರನ್ನು ಸುರಕ್ಷಿತವಾಗಿ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.



