ನವದೆಹಲಿ: ಏಪ್ರಿಲ್ 1ರಿಂದ ದೇಶದ ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಕಡ್ಡಾಯವಾಗಿ 20% ಎಥೆನಾಲ್ ಮಿಶ್ರಿತ ಪೆಟ್ರೋಲ್ (E20) ಮಾರಾಟ ಮಾಡಬೇಕೆಂದು ಕೇಂದ್ರ ಸರ್ಕಾರ ಆದೇಶಿಸಿದೆ.ಫೆಬ್ರವರಿ 17ರಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಈ ಕುರಿತು ಅಧಿಸೂಚನೆ ಹೊರಡಿಸಿದೆ.
ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ನಿರ್ದಿಷ್ಟತೆಗಳ ಪ್ರಕಾರ ಮತ್ತು ರಿಸರ್ಚ್ ಆಕ್ಟೇನ್ ನಂಬರ್ (RON) 95 ಹೊಂದಿರುವ 20% ಎಥೆನಾಲ್ ಮಿಶ್ರಿತ ಪೆಟ್ರೋಲ್ ಮಾರಾಟ ಮಾಡಬೇಕು ಎಂದು ತಿಳಿಸಲಾಗಿದೆ.
RON ಎನ್ನುವುದು ಎಂಜಿನ್ ಕಾರ್ಯಕ್ಷಮತೆಯನ್ನು ಅಳೆಯುವ ಪ್ರಮುಖ ಮಾನದಂಡವಾಗಿದೆ. ಎಥೆನಾಲ್ ಸ್ವಭಾವಿಕವಾಗಿ ಸುಮಾರು 108ಕ್ಕಿಂತ ಹೆಚ್ಚಿನ ಆಕ್ಟೇನ್ ರೇಟಿಂಗ್ ಹೊಂದಿದೆ. ಎಥೆನಾಲ್ ಮಿಶ್ರಣದಿಂದ ಎಂಜಿನ್‌ಗೆ ತೊಂದರೆ ಉಂಟಾಗದಂತೆ RON 95 ಮಾನದಂಡದ ಇಂಧನವನ್ನು ಮಾರಾಟ ಮಾಡಲು ಸರ್ಕಾರ ಅನುಮತಿ ನೀಡಿದೆ.
RON 95 ಪೆಟ್ರೋಲ್ ಆಧುನಿಕ ಹಾಗೂ ಉನ್ನತ ಕಾರ್ಯಕ್ಷಮತೆಯ ಎಂಜಿನ್‌ಗಳಿಗೆ ಸೂಕ್ತವೆಂದು ಪರಿಗಣಿಸಲಾಗುತ್ತದೆ. ಇದು ಹೆಚ್ಚು ಸ್ವಚ್ಛವಾಗಿ ಉರಿಯುವ ಮೂಲಕ ಇಂಗಾಲದ ಮಾನಾಕ್ಸೈಡ್ ಮತ್ತು ಹೈಡ್ರೋಕಾರ್ಬನ್ ಹೊರಸೂಸುವಿಕೆಯನ್ನು 30ರಿಂದ 44 ಶೇಕಡಾವರೆಗೆ ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.
ಇದಕ್ಕೂ ಮುನ್ನ 2003ರೊಳಗೆ ಭಾರತದಲ್ಲಿ ಕಚ್ಚಾ ತೈಲದಿಂದ ಸಂಸ್ಕರಣೆಗೊಂಡ ಪೆಟ್ರೋಲ್ ನೇರವಾಗಿ ಬಂಕ್‌ಗಳಿಗೆ ಬರುತ್ತಿತ್ತು. ಈಗ ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಣ ಮಾಡುವ ಪದ್ಧತಿ ಅನುಸರಿಸಲಾಗುತ್ತಿದೆ. 20% ಎಥೆನಾಲ್ ಮತ್ತು 80% ಪೆಟ್ರೋಲ್ ಮಿಶ್ರಿತ ಇಂಧನವನ್ನು ‘ಇ20’ ಎಂದು ಕರೆಯಲಾಗುತ್ತದೆ. ಕಬ್ಬು, ಜೋಳ ಅಥವಾ ಹೆಚ್ಚುವರಿ ಧಾನ್ಯಗಳಿಂದ ತಯಾರಿಸಲಾದ ಜೈವಿಕ ಇಂಧನವೇ ಎಥೆನಾಲ್ ಆಗಿದೆ.



