ತೆರೆಮೇಲೆ ಒಟ್ಟಿಗೆ ನಟಿಸುತ್ತಾ ಪ್ರೀತಿಯಲ್ಲಿ ಬೀಳುವುದು ಹೊಸದೇನಲ್ಲ. ಇದೀಗ ಕಿರುತೆರೆಯಲ್ಲಿ ಮತ್ತೊಂದು ಜೋಡಿ ರಿಯಲ್ ಲೈಫ್‌ನಲ್ಲಿ ಒಂದಾಗಲು ಸಿದ್ಧವಾಗಿದೆ.
ಜೀ ಕನ್ನಡದ ಅಮೃತಧಾರೆ ಧಾರಾವಾಹಿಯಲ್ಲಿ ಜೆಡಿ ಪಾತ್ರ ಮಾಡುತ್ತಿರುವ ರಾಣವ್ ಗೌಡ ಹಾಗೂ ಕಲರ್ಸ್ ಕನ್ನಡದ ಭಾರ್ಗವಿ ಎಲ್ಎಲ್ಬಿ ಧಾರಾವಾಹಿಯಲ್ಲಿ ಭಾಗರ್ವಿ ಪಾತ್ರದಲ್ಲಿ ನಟಿಸುತ್ತಿರುವ ರಾಧಾ ಭಗವತಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಇಬ್ಬರೂ ಬೇರೆ ಬೇರೆ ವಾಹಿನಿಗಳಲ್ಲಿ ಕೆಲಸ ಮಾಡುತ್ತಿದ್ದರೂ, ಇವರ ಪರಿಚಯ ಮತ್ತು ಪ್ರೀತಿ ‘ಅಮೃತಧಾರೆ’ ಧಾರಾವಾಹಿಯಲ್ಲಿಯೇ ಮೊಳಕೆಯೊಡೆದಿತ್ತು. ರಾಧಾ ಭಗವತಿ ಈ ಹಿಂದೆ ‘ಅಮೃತಧಾರೆ’ಯಲ್ಲಿ ಮಲ್ಲಿ ಎಂಬ ಪಾತ್ರ ನಿರ್ವಹಿಸಿದ್ದರು. ಆ ಪಾತ್ರದಲ್ಲಿ ಅವರು ಜೆಡಿ ಪತ್ನಿಯಾಗಿ ಕಾಣಿಸಿಕೊಂಡಿದ್ದರು. ಬಳಿಕ ‘ಭಾರ್ಗವಿ ಎಲ್ಎಲ್ಬಿ’ ಅವಕಾಶ ದೊರಕಿದ ಹಿನ್ನೆಲೆಯಲ್ಲಿ ಧಾರಾವಾಹಿಯಿಂದ ಹೊರಬಂದಿದ್ದರು.
ಸೀರಿಯಲ್ ಚಿತ್ರೀಕರಣದ ಸಮಯದಲ್ಲೇ ಇವರಿಬ್ಬರ ಮಧ್ಯೆ ಪ್ರೀತಿ ಬೆಳೆದಿದೆ ಎಂದು ಹೇಳಲಾಗುತ್ತಿದೆ. ಈಗ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡು ಹೊಸ ಬದುಕಿಗೆ ಕಾಲಿಡಲು ಸಜ್ಜಾಗಿದೆ.
ರಾಣವ್ ಗೌಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಇಬ್ಬರೂ ಹಾರ ಹಾಕಿಕೊಂಡಿರುವ ಫೋಟೋ ಹಂಚಿಕೊಂಡು “ಫೈನಲಿ” ಎಂಬ ಕ್ಯಾಪ್ಶನ್ ನೀಡಿದ್ದಾರೆ. ಈ ಪೋಸ್ಟ್ ನೋಡಿದ ಅಭಿಮಾನಿಗಳಲ್ಲಿ ಮೊದಲಿಗೆ ಮದುವೆಯೇ ಆಗಿಬಿಟ್ಟಿತೇ ಎಂಬ ಕುತೂಹಲ ಮೂಡಿತ್ತು. ಆದರೆ, ಇವರು ನಿಶ್ಚಿತಾರ್ಥ ಮಾತ್ರ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ.
ರಾಣವ್ ಗೌಡ ‘ಅಮೃತಧಾರೆ’ ಜೊತೆಗೆ ‘ಶುಭಸ್ಯ ಶೀಘ್ರಂ’ ಧಾರಾವಾಹಿಯಲ್ಲೂ ಅಭಿನಯಿಸುತ್ತಿದ್ದಾರೆ. ರಾಧಾ ಭಗವತಿ ‘ಭಾರ್ಗವಿ ಎಲ್ಎಲ್ಬಿ’ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.
ತೆರೆ ಮೇಲಿನ ಜೋಡಿ ಇದೀಗ ನಿಜ ಜೀವನದಲ್ಲೂ ಒಂದಾಗುತ್ತಿರುವುದು ಅಭಿಮಾನಿಗಳಿಗೆ ಖುಷಿ ಹಾಗೂ ಅಚ್ಚರಿ ಎರಡನ್ನೂ ತಂದಿದೆ.



