ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಹತ್ವದ ಮಾಹಿತಿ ನೀಡಿದ್ದಾರೆ. ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಆರೋಪಿ ಇಂದುಶೇಖರ್ ವೈಯಕ್ತಿಕ ಕಾರಣಗಳಿಂದ ಏಳು ಮಂದಿಯನ್ನು ಹತ್ಯೆ ಮಾಡಿರುವುದಾಗಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಅಲ್ಲದೆ, ಈ ಕೃತ್ಯದಲ್ಲಿ ಆರೋಪಿಯ ಏಳು ವರ್ಷದ ಮಗಳ ಪಾತ್ರವಿರುವ ಶಂಕೆಯೂ ವ್ಯಕ್ತವಾಗಿದೆ.

ಬೆಂಗಳೂರಿನ ರಾಜಾಜಿನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಪ್ರಕರಣದ ತನಿಖೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಹತ್ಯೆ ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿರುವ ಅಂಶಗಳನ್ನು ವಿವರಿಸಿದರು.
ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ನವೆಂಬರ್ 3ರಂದು ಏಳು ಮಂದಿ ನಾಪತ್ತೆಯಾಗಿರುವ ಕುರಿತು ದೂರು ದಾಖಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದಾಗ ಒಂದೇ ಕುಟುಂಬದ ಏಳು ಮಂದಿಯ ಹತ್ಯೆಯ ಆರೋಪ ಬೆಳಕಿಗೆ ಬಂದಿದೆ. ಈ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಆರೋಪಿ ಇಂದುಶೇಖರ್ ತನ್ನ ಪತ್ನಿ, ಅತ್ತೆ, ಪತ್ನಿಯ ಸಹೋದರರು ಹಾಗೂ ಅತ್ತಿಗೆಯರು ಸೇರಿದಂತೆ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಿರುವ ಆರೋಪ ಎದುರಿಸುತ್ತಿದ್ದಾನೆ. ರುಬ್ಬುವ ಕಲ್ಲನ್ನು ಬಳಸಿ ಹತ್ಯೆ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಕೃತ್ಯದ ನಿಖರ ವಿವರಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಏಳು ಮಂದಿಯ ಹತ್ಯೆ ಒಪ್ಪಿಕೊಂಡ ಆರೋಪಿ!
ಪೊಲೀಸ್ ಆಯುಕ್ತರ ಮಾಹಿತಿ ಪ್ರಕಾರ, ಆರೋಪಿ ಇಂದುಶೇಖರ್ ತನ್ನ ಸ್ವಯಂಪ್ರೇರಿತ ಹೇಳಿಕೆಯಲ್ಲಿ ಏಳು ಮಂದಿಯನ್ನು ಹತ್ಯೆ ಮಾಡಿರುವುದಾಗಿ ತಿಳಿಸಿದ್ದಾನೆ. ವೈಯಕ್ತಿಕ ಕಾರಣಗಳಿಂದ ಈ ಕೃತ್ಯ ಎಸಗಿರುವುದಾಗಿ ಹೇಳಿಕೊಂಡಿದ್ದಾನೆ ಎನ್ನಲಾಗಿದೆ.
ಈವರೆಗೆ ಏಳು ಮಂದಿಯ ಪೈಕಿ ಒಬ್ಬರ ಮೃತದೇಹ ಮಾತ್ರ ಪತ್ತೆಯಾಗಿದ್ದು, ಉಳಿದ ಆರು ಮೃತದೇಹಗಳಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆರೋಪಿ ನೀಡಿರುವ ಮಾಹಿತಿಯ ಆಧಾರದಲ್ಲಿ ವಿವಿಧ ಪ್ರದೇಶಗಳಲ್ಲಿ ಹುಡುಕಾಟ ಮುಂದುವರಿದಿದೆ.
ಆರೋಪಿಗೆ ಏಳು ವರ್ಷದ ಮಗಳ ಸಾಥ್?
ಈ ಪ್ರಕರಣದಲ್ಲಿ ಮತ್ತೊಂದು ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಆರೋಪಿ ಇಂದುಶೇಖರ್ ತನ್ನ ಏಳು ವರ್ಷದ ಮಗಳನ್ನೂ ಕೃತ್ಯದಲ್ಲಿ ಬಳಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅಪ್ರಾಪ್ತ ಮಗಳ ಮೇಲೆ ಆರೋಪಿ ಪ್ರಭಾವ ಬೀರಿದ್ದಾನೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಮಗಳನ್ನು ತನ್ನ ಮಾತಿನಂತೆ ನಡೆದುಕೊಳ್ಳುವಂತೆ ಮನವೊಲಿಸಿ ಕೃತ್ಯಕ್ಕೆ ಬಳಸಿಕೊಂಡಿರುವ ಸಾಧ್ಯತೆಯ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ, ಬಾಲಕಿಯ ಪಾತ್ರದ ಬಗ್ಗೆ ತನಿಖೆ ಇನ್ನೂ ಮುಂದುವರಿದಿದ್ದು, ಅಂತಿಮವಾಗಿ ಯಾವುದೇ ನಿರ್ಧಾರಕ್ಕೆ ಬಂದಿಲ್ಲ.
ಇದೇ ವೇಳೆ ಆರೋಪಿ ಮತ್ತೊಂದು ಮಗುವನ್ನೂ ಹತ್ಯೆ ಮಾಡಲು ಯೋಜನೆ ರೂಪಿಸಿದ್ದ ಎಂಬ ಮಾಹಿತಿಯನ್ನೂ ಪೊಲೀಸ್ ಆಯುಕ್ತರು ನೀಡಿದ್ದಾರೆ. ಆರೋಪಿಯನ್ನು ಬಂಧಿಸುವ ಸಂದರ್ಭದಲ್ಲಿ ಆ ಮಗುವನ್ನು ಪೊಲೀಸರು ರಕ್ಷಿಸಿದ್ದಾರೆ ಎಂದು ತಿಳಿಸಿದ್ದಾರೆ.
15ರಿಂದ 20 ದಿನಗಳ ಅಂತರದಲ್ಲಿ ನಾಪತ್ತೆಯಾಗಿದ್ದ ಕುಟುಂಬಸ್ಥರು!
ಪ್ರಕರಣದ ತನಿಖೆಯಲ್ಲಿ ಕುಟುಂಬದ ಸದಸ್ಯರು ಒಂದೇ ದಿನ ನಾಪತ್ತೆಯಾಗಿರಲಿಲ್ಲ ಎಂಬ ಅಂಶವೂ ಬೆಳಕಿಗೆ ಬಂದಿದೆ. ಸುಮಾರು 15ರಿಂದ 20 ದಿನಗಳ ಅವಧಿಯಲ್ಲಿ ಒಬ್ಬೊಬ್ಬರಾಗಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಕುಟುಂಬದ ಸದಸ್ಯರು ಕಾಣೆಯಾಗಿರುವ ಕುರಿತು ನವೆಂಬರ್ 3ರಂದು ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು. ಮೃತರ ಮೊಬೈಲ್ಗಳನ್ನು ಬಳಸಿರುವ ಬಗ್ಗೆಯೂ ತನಿಖೆಯಲ್ಲಿ ಮಾಹಿತಿ ಲಭ್ಯವಾಗಿದ್ದು, ಈ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಆರೋಪಿ ವಿರುದ್ಧ ಈ ಹಿಂದೆಯೂ ಪ್ರಕರಣ ದಾಖಲು!
ಆರೋಪಿ ಇಂದುಶೇಖರ್ ಖಾಸಗಿ ಕಂಪನಿಯೊಂದರಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಅಲ್ಲದೆ, ಸುಮಾರು ಐದು ವರ್ಷಗಳ ಹಿಂದೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಸರಗಳ್ಳತನ ಪ್ರಕರಣ ದಾಖಲಾಗಿತ್ತು ಎಂಬ ಮಾಹಿತಿಯನ್ನೂ ನೀಡಿದ್ದಾರೆ.
ಸದ್ಯ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ಹತ್ಯೆಗೆ ನಿಖರ ಕಾರಣವೇನು, ಕೃತ್ಯವನ್ನು ಹೇಗೆ ನಡೆಸಲಾಗಿದೆ ಹಾಗೂ ಉಳಿದ ಆರು ಮೃತದೇಹಗಳನ್ನು ಎಲ್ಲೆಲ್ಲಿ ಎಸೆಯಲಾಗಿದೆ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.









