ಮಂತ್ರಾಲಯ: ಇಲ್ಲಿನ ಶ್ರೀ ಮಂತ್ರಾಲಯ ಕ್ಷೇತ್ರದಲ್ಲಿ ಶ್ರೀ ರಾಘವ ಸರೋವರ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ರಾಘವ ಸರೋವರ’ ನಿರ್ಮಾಣ ಯೋಜನೆಗೆ ನೆನ್ನೆ ಮಂತ್ರಾಲಯ ಧರ್ಮಪೀಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳು ಭೂಮಿ ಪೂಜೆಯನ್ನು ನೆರವೇರಿಸಿದರು.


ಪ್ರಕೃತಿಯನ್ನು ಕಾಪಾಡಿಕೊಳ್ಳುವುದು, ಪರಿಸರ ಜಾಗೃತಿ ಮೂಡಿಸುವುದು ಹಾಗೂ ಪ್ರಾಣಿ-ಪಕ್ಷಿಗಳು ಮತ್ತು ಮಾನವ ಸಂಕುಲದ ಕಲ್ಯಾಣವನ್ನು ಮುಖ್ಯ ಉದ್ದೇಶವಾಗಿರಿಸಿಕೊಂಡು ಈ ಸುಂದರ ಸರೋವರ ನಿರ್ಮಾಣದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ವಿನ್ಯಾಸ ಮತ್ತು ಟ್ರಸ್ಟ್ ಕೊಡುಗೆ:
ಈ ಯೋಜನೆಯ ವಿನ್ಯಾಸವನ್ನು ಬೆಂಗಳೂರಿನ ‘ಇಂಡಸ್ ಹರ್ಬ್ಸ್’ ಸಂಸ್ಥೆಯ ರವೀಂದ್ರ ಟಿ.ಸಿ. ಅವರು ಸಿದ್ಧಪಡಿಸಿದ್ದಾರೆ. ಟ್ರಸ್ಟ್ನ ಬೆನ್ನೆಲುಬಾಗಿ ಧನಂಜಯ್, ಅನಿಲ್ ಹಾಗೂ ಆನಂದ್ ಶ್ರಮಿಸುತ್ತಿದ್ದು, ಹಿರಿಯ ಕಲಾವಿದ ಹಾಗೂ ಟ್ರಸ್ಟಿ ಮದನ್ ಪಟೇಲ್ ಅವರು ಈ ಬೃಹತ್ ಯೋಜನೆಗಾಗಿ ₹25 ಲಕ್ಷ ರೂಪಾಯಿಗಳ ದೇಣಿಗೆಯನ್ನು ನೀಡಿದ್ದಾರೆ.

ಶ್ರೀ ಸುಬುಧೇಂದ್ರ ತೀರ್ಥ ಶ್ರೀಗಳ ಆಶೀರ್ವಚನ:
ಭೂಮಿ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳು, “ಪರಿಸರ ಹಾಗೂ ಪ್ರಕೃತಿ ಸಂರಕ್ಷಣೆಯ ಈ ಸತ್ಕಾರ್ಯಕ್ಕೆ ಮಂತ್ರಾಲಯ ಧರ್ಮಪೀಠವು ಸದಾ ಬೆಂಬಲವಾಗಿ ನಿಲ್ಲುತ್ತದೆ” ಎಂದು ಅಭಯ ನೀಡಿದರು.
ಇದೇ ವೇಳೆ ಮಾತನಾಡಿದ ಮದನ್ ಪಟೇಲ್, “ಈ ಜಗತ್ತಿನಲ್ಲಿ ಪ್ರಕೃತಿಗಿಂತ ದೊಡ್ಡ ಕಲಾವಿದ ಮತ್ತೊಬ್ಬನಿಲ್ಲ. ಅಂತಹ ಪ್ರಕೃತಿಯನ್ನು ನಾವು ರಕ್ಷಿಸಿ, ಮುಂದಿನ ಪೀಳಿಗೆಗೆ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆ,” ಎಂದರು.
‘ನೀರು ನಿಜವಾದ ಬಿಳಿ ಚಿನ್ನ’: ಸಂಸದ ಡಾ. ಸಿ.ಎನ್. ಮಂಜುನಾಥ್
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಉಪಸ್ಥಿತರಿದ್ದ ಸಂಸದ ಡಾ. ಸಿ.ಎನ್. ಮಂಜುನಾಥ್ ಮಾತನಾಡಿ, “ಇಂದಿನ ಕಾಲದಲ್ಲಿ ನೀರು ನಿಜವಾದ ಬಿಳಿ ಚಿನ್ನವಾಗಿದೆ. ಆದರೆ ದುರಂತವೆಂದರೆ, ಇಂದಿನ ಜನರಿಗೆ ಜೀವಜಲವಾದ ‘ಅಂತರ್ಜಲ’ದ ಬಗ್ಗೆ ಕಾಳಜಿ ಕಡಿಮೆಯಾಗಿ,‘ಅಂತರ್ಜಾಲದ ಬಳಕೆಯ ಬಗ್ಗೆಯೇ ತಲೆಬಿಸಿ ಜಾಸ್ತಿಯಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು. ಇದೇ ವೇಳೆ ಪರಿಸರ ಕಾಳಜಿಯಿಂದ ₹25 ಲಕ್ಷ ದೇಣಿಗೆ ನೀಡಿದ ಮದನ್ ಪಟೇಲ್ ಅವರ ಉದಾರ ಮನಸ್ಸನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಸಮಾರಂಭದಲ್ಲಿ ಗಣ್ಯರ ಸಾನ್ನಿಧ್ಯ:
ಈ ಕಾರ್ಯಕ್ರಮದಲ್ಲಿ ಸಂಸದ ಡಾ. ಸಿ.ಎನ್. ಮಂಜುನಾಥ್ ಅವರ ಧರ್ಮಪತ್ನಿ ಅನಸೂಯಾ ಮಂಜುನಾಥ್, ಪ್ರೊಫೆಸರ್ ಡಾ. ಸಿ. ರಾಮಚಂದ್ರ, ಮದನ್ ಪಟೇಲ್ ಅವರ ಪುತ್ರ ಮಯೂರ್ ಪಟೇಲ್, ‘ರಾಶಿ’ ಚಿತ್ರದ ನಾಯಕ ನಟ ಆದಿತ್ಯ ಶಶಿಕುಮಾರ್, ‘ರಾಶಿ’ ಚಿತ್ರದ ನಿರ್ಮಾಪಕ ಅಖಿಲೇಶ್ ಸೇರಿದಂತೆ ಹಲವು ರಂಗಗಳ ಪ್ರಮುಖ ಗಣ್ಯರು ಹಾಗೂ ಅತಿಥಿಗಳು ಉಪಸ್ಥಿತರಿದ್ದರು.









