ಬೆಂಗಳೂರು: ಪತ್ನಿಯೊಂದಿಗಿನ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಏಳು ಮಂದಿಯನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ ಇಂದುಶೇಖರ್ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಮೃತದೇಹಗಳನ್ನು ಸಾಗಿಸುವ ವೇಳೆ ಆರೋಪಿಯ ಕಾರಿನಲ್ಲಿದ್ದ 13 ವರ್ಷದ ಬಾಲಕ, ಹತ್ಯೆಯ ಬಳಿಕ ನಡೆದ ಘಟನೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
ಪತ್ನಿ ಸುನೀತಾ ಅವರೊಂದಿಗೆ ಆಗಾಗ್ಗೆ ಜಗಳವಾಗುತ್ತಿತ್ತು. ಪತ್ನಿಯ ಕುಟುಂಬದವರೇ ತನ್ನ ನೆಮ್ಮದಿಯ ಬದುಕಿಗೆ ಅಡ್ಡಿಯಾಗಿದ್ದಾರೆ ಎಂದು ದ್ವೇಷ ಬೆಳೆಸಿಕೊಂಡಿದ್ದ ಇಂದುಶೇಖರ್, ಪತ್ನಿ ಸೇರಿದಂತೆ ಆಕೆಯ ಕುಟುಂಬದ ಆರು ಮಂದಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾನೆ ಎಂಬ ಆರೋಪವಿದೆ.
ಈ ಪ್ರಕರಣದಲ್ಲಿ ಆರೋಪಿಯ 17 ವರ್ಷದ ಮಗಳು ಕೂಡ ಕೃತ್ಯಕ್ಕೆ ಸಹಕರಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಸುನೀತಾ ಅವರ ಅಣ್ಣನ ಮಗನಾಗಿರುವ 13 ವರ್ಷದ ಬಾಲಕ ಹಲವು ದಿನಗಳ ಕಾಲ ಆರೋಪಿಯ ಜೊತೆಯಲ್ಲಿದ್ದ ಎನ್ನಲಾಗಿದೆ.
ಗೋಣಿ ಚೀಲಗಳಲ್ಲಿ ಮೃತದೇಹ ಸಾಗಿಸಿದ್ದನ್ನು ನೋಡಿದ್ದ ಬಾಲಕ
ಆರೋಪಿಯಿಂದ ಕೊಲೆಯಾಗುವುದರಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿರುವ ಬಾಲಕ, ಮೃತದೇಹಗಳನ್ನು ಗೋಣಿ ಚೀಲಗಳಲ್ಲಿ ತುಂಬಿ ಬೇರೆ ಬೇರೆ ಕಡೆ ಎಸೆದಿರುವುದನ್ನು ನೋಡಿದ್ದಾಗಿ ಹೇಳಿದ್ದಾನೆ.
ಘಟನೆ ಕುರಿತು ಮಾತನಾಡಿರುವ ಬಾಲಕ, “ನನ್ನನ್ನು ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಶೃಂಗೇರಿ ಹಾಗೂ ವಿಮಾನ ನಿಲ್ದಾಣದ ಕಡೆ ಕರೆದುಕೊಂಡು ಹೋಗಿದ್ದರು. ಐದಾರು ದಿನಗಳಿಂದ ಅವರ ಜೊತೆ ಇದ್ದೆ. ನನ್ನ ಅಕ್ಕ ಕೂಡ ನನ್ನ ಜೊತೆಯಲ್ಲಿದ್ದಳು” ಎಂದು ತಿಳಿಸಿದ್ದಾನೆ.
“ಗೋಣಿ ಚೀಲಗಳಲ್ಲಿ ಏನನ್ನೋ ಮುಚ್ಚಿಟ್ಟಿದ್ದರು. ಮುಟ್ಟಲು ಹೋದರೆ ಮುಟ್ಟಬೇಡ ಎಂದು ಹೇಳುತ್ತಿದ್ದರು. ಚೀಲಗಳಿಂದ ಕೆಟ್ಟ ವಾಸನೆ ಬರುತ್ತಿತ್ತು. ಕಾರಿನಲ್ಲಿ ಹೋಗುವಾಗ ಡಿಕ್ಕಿಯನ್ನು ಪೂರ್ಣವಾಗಿ ತೆರೆದಿದ್ದೆ. ಆಗ ಅವರು ಬೈದು ಮುಚ್ಚಿಸಿದ್ದರು. ವಾಹನಗಳು ಬಾರದ, ಜನರಿಲ್ಲದ ಸ್ಥಳವನ್ನು ನೋಡಿ ಚೀಲಗಳನ್ನು ಎಸೆದರು. ನಾಲ್ಕು ಮೃತದೇಹಗಳಿದ್ದ ಚೀಲಗಳನ್ನು ಎಸೆಯುವುದನ್ನು ನಾನು ನೋಡಿದ್ದೇನೆ” ಎಂದು ಬಾಲಕ ಹೇಳಿದ್ದಾನೆ ಎನ್ನಲಾಗಿದೆ.
ತಂದೆಯನ್ನು ಹುಡುಕಿಕೊಂಡು ಹೋದಾಗ ತಡೆದ ಅಕ್ಕ
ಶುಕ್ರವಾರ ರಾತ್ರಿ ತನ್ನ ತಂದೆ-ತಾಯಿ ಮನೆಯಲ್ಲೇ ಇದ್ದರು. ಆದರೆ ಮರುದಿನ ಬೆಳಗ್ಗೆ ಎದ್ದಾಗ ತಂದೆ ಕಾಣಿಸಲಿಲ್ಲ. ತಂದೆಯನ್ನು ಹುಡುಕಿಕೊಂಡು ತಾಯಿ ಹೊರಗೆ ಹೋದಾಗ ಅವರ ಹಿಂದೆ ಹೋಗಲು ಪ್ರಯತ್ನಿಸಿದ್ದೆ. ಆದರೆ ಅಕ್ಕ ತನ್ನನ್ನು ತಡೆದು ಬಲವಂತವಾಗಿ ಮನೆಯೊಳಗೆ ಕರೆದುಕೊಂಡು ಬಂದಿದ್ದಳು ಎಂದು ಬಾಲಕ ವಿವರಿಸಿದ್ದಾನೆ.
“ಎಲ್ಲರ ಮೊಬೈಲ್ ಫೋನ್ಗಳು ಅವರ ಬಳಿಯೇ ಇದ್ದವು. ಅಪ್ಪ ಮತ್ತು ಅಕ್ಕ ಇಬ್ಬರೂ ಗುಸುಗುಸು ಮಾತನಾಡುತ್ತಿದ್ದರು” ಎಂದು ಬಾಲಕ ಹೇಳಿರುವುದಾಗಿ ವರದಿಯಾಗಿದೆ.
ಏಳು ಮೃತದೇಹಗಳಿಗಾಗಿ ಮುಂದುವರಿದ ಶೋಧ
ತಂದೆ-ತಾಯಿ ಸಾವನ್ನಪ್ಪಿರುವ ವಿಚಾರವೂ ಬಾಲಕನಿಗೆ ತಿಳಿದಿರಲಿಲ್ಲ ಎನ್ನಲಾಗಿದೆ. ಆರೋಪಿಯು ಏಳು ಮೃತದೇಹಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಎಸೆದಿರುವ ಶಂಕೆಯಿದ್ದು, ಅವುಗಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಬಾಲಕ ನೀಡಿರುವ ಮಾಹಿತಿಯೂ ತನಿಖೆಗೆ ಮಹತ್ವದ ಸುಳಿವು ನೀಡಿದೆ. ಪ್ರಕರಣದಲ್ಲಿ ಆರೋಪಿಯ ಮಗಳ ಪಾತ್ರ ಸೇರಿದಂತೆ ಹಲವು ಅಂಶಗಳ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.










