ಬೆಂಗಳೂರು: ಮಹಿಳಾ ದಿನಾಚರಣೆ ಸಮೀಪಿಸುತ್ತಿದ್ದಂತೆ ಹೆಣ್ಣುಮಕ್ಕಳ ಅಚ್ಚುಮೆಚ್ಚಿನ ಮೈಸೂರು ಸಿಲ್ಕ್ ಸೀರೆಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಕಾಣಿಸಿಕೊಂಡಿದೆ. ಬೆಂಗಳೂರಿನ ಜಯನಗರದಲ್ಲಿರುವ ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮ (KSIC) ಮಳಿಗೆಯ ಮುಂದೆ ಮಹಿಳೆಯರು ಮುಂಜಾನೆ 4 ಗಂಟೆಯಿಂದಲೇ ಸರತಿಯ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬಂದಿದೆ.
ಸಾಮಾನ್ಯವಾಗಿ ಈ ಮಳಿಗೆ ಬೆಳಗ್ಗೆ 10:30ಕ್ಕೆ ಮಾತ್ರ ಬಾಗಿಲು ತೆರೆಯುತ್ತದೆ. ಆದರೆ ಸೀರೆಗಳ ಸ್ಟಾಕ್ ಖಾಲಿಯಾಗುವ ಭಯದಿಂದ ಮಹಿಳೆಯರು ಬೆಳಗಿನ ಜಾವವೇ ಬಂದು ಕ್ಯೂನಲ್ಲಿ ನಿಂತಿದ್ದಾರೆ. ಕೇವಲ ಬೆಂಗಳೂರಿನವರಷ್ಟೇ ಅಲ್ಲದೆ ಶಿರಸಿ, ಶಿರಾ, ಚಳ್ಳಕೆರೆ ಸೇರಿದಂತೆ ನೆರೆಯ ಅನಂತಪುರದಿಂದಲೂ ಮಹಿಳೆಯರು ಮೈಸೂರು ಸಿಲ್ಕ್ ಸೀರೆ ಖರೀದಿಸಲು ಆಗಮಿಸಿದ್ದಾರೆ.
ಮಳಿಗೆಯ ಸಿಬ್ಬಂದಿ ಅಪಾರ ಸಂಖ್ಯೆಯಲ್ಲಿ ಸೇರಿರುವ ಮಹಿಳೆಯರನ್ನು ನಿಯಂತ್ರಿಸಲು ಟೋಕನ್ ವ್ಯವಸ್ಥೆ ಮಾಡಿದ್ದು, ಟೋಕನ್ ಪಡೆಯಲು ಮಹಿಳೆಯರ ನಡುವೆ ಭಾರೀ ನೂಕಾಟ ಹಾಗೂ ವಾಗ್ವಾದಗಳೂ ನಡೆಯುತ್ತಿವೆ.
ಸದ್ಯ ಮಳಿಗೆಯಲ್ಲಿ ಕೇವಲ 45 ಮೈಸೂರು ಸಿಲ್ಕ್ ಸೀರೆಗಳು ಮಾತ್ರ ಲಭ್ಯವಿದ್ದು, ಹೊರಗಡೆ 100ಕ್ಕೂ ಹೆಚ್ಚು ಮಹಿಳೆಯರು ಕಾದು ಕುಳಿತಿದ್ದಾರೆ. ಈ ಹಿನ್ನೆಲೆಯಲ್ಲಿ ‘ಒಂದು ಟೋಕನ್‌ಗೆ ಒಂದು ಸೀರೆ’ ಎಂಬ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲಾಗಿದೆ.
ಇಲ್ಲಿ ಮೈಸೂರು ಸಿಲ್ಕ್ ಸೀರೆಗಳು ವಾರದ ಎಲ್ಲಾ ದಿನಗಳಲ್ಲೂ ಲಭ್ಯವಿರುವುದಿಲ್ಲ. ಪ್ರತಿ ಗುರುವಾರ ಹಾಗೂ ಶನಿವಾರ ಮಾತ್ರ ವಿತರಣೆ ಮಾಡಲಾಗುತ್ತದೆ. ಸೀರೆಗಳ ಬೆಲೆ 26 ಸಾವಿರ ರೂಪಾಯಿಯಿಂದ ಆರಂಭವಾಗಿ ಸುಮಾರು 3 ಲಕ್ಷ ರೂಪಾಯಿವರೆಗೂ ಇದೆ.
ಮುಂಬರುವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ತಮಗೆ ತಾವೇ ಉಡುಗೊರೆ ನೀಡಿಕೊಳ್ಳಲು ಹಾಗೂ ತಮ್ಮ ಪ್ರೀತಿಪಾತ್ರರಿಗೆ ಕಾಣಿಕೆ ನೀಡಲು ಮಹಿಳೆಯರು ದುಬಾರಿ ಮೈಸೂರು ಸಿಲ್ಕ್ ಸೀರೆಗಳ ಖರೀದಿಗೆ ಮುಗಿಬಿದ್ದಿದ್ದಾರೆ.



