ಅಯೋಧ್ಯೆ: ರಾಮನವಮಿ ಹಬ್ಬದ ಪವಿತ್ರ ಸಂದರ್ಭದಲ್ಲಿ ಅಯೋಧ್ಯೆ ರಾಮ ಮಂದಿರದಲ್ಲಿ ನಡೆದ ‘ಸೂರ್ಯ ತಿಲಕ’ ಆಚರಣೆ ಈ ಬಾರಿ ವಿಶೇಷ ವೈಭವದಿಂದ ನೆರವೇರಿತು. ಬಾಲ ರಾಮನ ಮೂರ್ತಿಯ ಹಣೆ ಮೇಲೆ ನೇರವಾಗಿ ಸೂರ್ಯ ಕಿರಣಗಳು ತಿಲಕದ ರೂಪದಲ್ಲಿ ಹೊಳೆಯುವ ಕ್ಷಣ ಭಕ್ತರಲ್ಲಿ ಅಪಾರ ಭಕ್ತಿ ಮತ್ತು ಆನಂದವನ್ನು ಮೂಡಿಸಿತು.
ಅಧಿಕಾರಿಗಳ ಮಾಹಿತಿ ಪ್ರಕಾರ, ಶ್ರೀರಾಮನ ಮೂರ್ತಿಯ ಹಣೆಯ ಮೇಲಿನ ಸೂರ್ಯ ತಿಲಕವು ಮಧ್ಯಾಹ್ನ 12 ಗಂಟೆಗೆ ಆರಂಭವಾಗಿ ಸುಮಾರು 3 ರಿಂದ 4 ನಿಮಿಷಗಳವರೆಗೆ ಸ್ಪಷ್ಟವಾಗಿ ಕಾಣಿಸಿಕೊಂಡಿತು.
ಈ ಅದ್ಭುತ ದೃಶ್ಯದ ಹಿಂದೆ ಸುಧಾರಿತ ವೈಜ್ಞಾನಿಕ ತಂತ್ರಜ್ಞಾನ ಕಾರ್ಯನಿರ್ವಹಿಸಿದೆ. ದೇವಸ್ಥಾನದ ಮೇಲ್ಭಾಗದಲ್ಲಿ ಅಳವಡಿಸಿದ ವಿಶೇಷ ಲೆನ್ಸ್ಗಳು ಮತ್ತು ಕನ್ನಡಿಗಳ ವ್ಯವಸ್ಥೆಯ ಮೂಲಕ ಸೂರ್ಯನ ಕಿರಣಗಳನ್ನು ನಿಖರವಾಗಿ ಗರ್ಭಗುಡಿಯೊಳಗೆ ಹರಿಸುವ ವ್ಯವಸ್ಥೆ ಮಾಡಲಾಗಿದೆ.
ಈ ತಂತ್ರಜ್ಞಾನವು ಸೂರ್ಯನ ಸ್ಥಿತಿಯನ್ನು ಲೆಕ್ಕಹಾಕಿ, ಸರಿಯಾದ ಸಮಯದಲ್ಲಿ ಕಿರಣಗಳು ರಾಮನ ಮೂರ್ತಿಯ ಹಣೆಯ ಮೇಲೆ ಬೀಳುವಂತೆ ವಿನ್ಯಾಸಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಇಡೀ ಅಯೋಧ್ಯೆ ನಗರ ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದು, ಎಲ್ಲೆಡೆ ಶ್ರೀರಾಮನ ಜಯಘೋಷ ಮೊಳಗಿತು.



