ಗದಗ: ಉತ್ತರ ಕರ್ನಾಟಕದಲ್ಲಿಯೇ ಪ್ರಸಿದ್ಧಿ ಪಡೆದ ಕುಷ್ಟಗಿ ಚಾಳದ ಅಮೃತಶಿಲೆಯ ಶ್ರೀರಾಮ ಮಂದಿರದಲ್ಲಿ ಭಕ್ತಿಭಾವದಿಂದ ರಾಮನವಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಶುಕ್ರವಾರ ರಾಮನವಮಿ ಅಂಗವಾಗಿ, ಕುಷ್ಟಗಿ ಕುಟುಂಬದವರಿಂದ ಸ್ಥಾಪನೆಗೊಂಡ ಸುಮಾರು 96 ವರ್ಷಗಳ ಇತಿಹಾಸ ಹೊಂದಿರುವ ಬೆಟಗೇರಿಯ ಈ ಪ್ರಸಿದ್ಧ ಅಮೃತಶಿಲೆಯ ಮಂದಿರದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಶ್ರೀರಾಮ, ಸೀತಾಮಾತೆ, ಲಕ್ಷ್ಮಣ, ಹನುಮಂತ ಹಾಗೂ ಗರುಡ ದೇವರ ಆಕರ್ಷಕ ಮೂರ್ತಿಗಳು ಭಕ್ತರ ಗಮನ ಸೆಳೆದವು.
ಬೆಳಿಗ್ಗೆಯಿಂದಲೇ ಹೋಮ, ಹವನ ಹಾಗೂ ವಿಶೇಷ ಅಲಂಕಾರ ಪೂಜೆಗಳು ನಡೆದವು. ಬಳಿಕ ಶ್ರೀರಾಮನ ಕಂಚಿನ ಮೂರ್ತಿಯನ್ನು ಸಂಪ್ರದಾಯಬದ್ಧವಾಗಿ ತೊಟ್ಟಿಲಿನಲ್ಲಿ ಇಟ್ಟು, ಭಕ್ತರು ಭಜನೆಗಳೊಂದಿಗೆ ತೊಟ್ಟಿಲು ತೂಗಿ ಶ್ರೀರಾಮನ ಜನ್ಮೋತ್ಸವವನ್ನು ಆಚರಿಸಿದರು.
ಅಯೋಧ್ಯೆಯ ಶ್ರೀರಾಮ ಜನ್ಮಸ್ಥಳದೊಂದಿಗೆ ಸಂಬಂಧ ಹೊಂದಿರುವ ಈ ಮಂದಿರದಲ್ಲಿ ಭಕ್ತರು ಲೋಕಕ್ಷೇಮಕ್ಕಾಗಿ ವಿಶೇಷ ಹೋಮಗಳಲ್ಲಿ ಭಾಗವಹಿಸಿದ್ದರು. ಪೂಜೆಯ ನಂತರ ಭಕ್ತರಿಗೆ ಕೊಸಂಬರಿ ಮತ್ತು ಪಾನಕ ವಿತರಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ, ಶನಿವಾರ ಸೀತಾ ಕಲ್ಯಾಣ ಮಹೋತ್ಸವ ನಡೆಯಲಿದ್ದು, ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅನ್ನಸಂತರ್ಪಣೆಯ ಪ್ರಸಾದ ಸ್ವೀಕರಿಸಬೇಕು ಎಂದು ಪ್ರಧಾನ ಅರ್ಚಕ ದೀವಾಕರ ದೀಕ್ಷಿತ್ ಹಾಗೂ ಟ್ರಸ್ಟಿಗಳಾದ ಕೊದಂಡರಾಮ ಕುಷ್ಟಗಿ, ನವೀನ ಕುಷ್ಟಗಿ ಮತ್ತು ಭರತ ಕುಷ್ಟಗಿ ಅವರು ಮನವಿ ಮಾಡಿದರು.



