ಶಿವಮೊಗ್ಗ: ಕೋಳಿ ಅಂಗಡಿಗೆ ಸಿಡಿಲು ಬಡಿದ ಪರಿಣಾಮ ಅಂಗಡಿ ಮಾಲೀಕ ಮೃತಪಟ್ಟಿರುವ ದುರ್ಘಟನೆ ಶಿವಮೊಗ್ಗ ತಾಲೂಕಿನ ರಾಮನಗರದಲ್ಲಿ ನಡೆದಿದೆ.
ಮೃತರನ್ನು ಹಾರನಹಳ್ಳಿ ನಿವಾಸಿ ಮುಶೇಖ್ ಮುಜೀಬ್ ಉರ್ ರಹಮಾನ್ (45) ಎಂದು ಗುರುತಿಸಲಾಗಿದೆ. ಅವರು ಹಾರನಹಳ್ಳಿ ಸಮೀಪದ ರಾಮನಗರದ ಸವಳಂಗ ರಸ್ತೆಯ ಪಕ್ಕದಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದರು.
ಸೋಮವಾರ ಸಂಜೆ ಮಳೆ-ಗಾಳಿಯ ನಡುವೆ ಬಂದ ಸಿಡಿಲು ಮೊದಲು ಅಂಗಡಿ ಪಕ್ಕದಲ್ಲಿದ್ದ ಮರಕ್ಕೆ ಬಡಿದಿದ್ದು, ಅದರ ಪ್ರಭಾವದಿಂದ ಅಂಗಡಿಗೂ ತಗುಲಿದೆ. ಸಿಡಿಲಿನ ತೀವ್ರತೆಗೆ ಅಂಗಡಿಯಲ್ಲಿದ್ದ ಕೋಳಿಗಳು ಸಾವನ್ನಪ್ಪಿದ್ದು, ಮಾಲೀಕ ರಹಮಾನ್ ಕೂಡ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಘಟನೆ ಬಳಿಕ ಸ್ಥಳೀಯರು ಧಾವಿಸಿ ಪರಿಶೀಲನೆ ನಡೆಸಿದರೂ ಆಗಲೇ ರಹಮಾನ್ ಮೃತಪಟ್ಟಿದ್ದರು. ಕುಂಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.



