ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗಡಿ ಗ್ರಾಮ ಎಬ್ಬರಿಯಲ್ಲಿ ಕುರಿ ಕದಿಯಲು ಹೋಗಿ ಸಿಕ್ಕಿಬಿದ್ದ ಯುವಕನನ್ನು ಗ್ರಾಮಸ್ಥರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಬಂಧಿತ ಆರೋಪಿಯನ್ನು ಬಂಗಾರಪೇಟೆ ತಾಲೂಕಿನ ಚಿನ್ನಕೋಟೆ ಗ್ರಾಮದ ರಾಘವೇಂದ್ರ (36) ಎಂದು ಗುರುತಿಸಲಾಗಿದೆ. ಕುರಿ ಕದಿಯಲು ತೆರಳಿದ್ದ ಮೂವರ ಪೈಕಿ ಓರ್ವ ಸಿಕ್ಕಿಬಿದ್ದಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ. ಪೊಲೀಸರು ಅವರಿಗಾಗಿ ಶೋಧ ನಡೆಸುತ್ತಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ರಾಘವೇಂದ್ರ ತನ್ನ ಇಬ್ಬರು ಸಹಚರರೊಂದಿಗೆ ದ್ವಿಚಕ್ರ ವಾಹನದಲ್ಲಿ ಎಬ್ಬಿರಿ ಗ್ರಾಮಕ್ಕೆ ತೆರಳಿ, ಗ್ರಾಮದ ಸುಂದರಪ್ಪ ಅವರಿಗೆ ಸೇರಿದ ಕುರಿಗಳ ಹಟ್ಟಿಯಿಂದ ಕುರಿಗಳನ್ನು ಕಳವು ಮಾಡಲು ಯತ್ನಿಸಿದ್ದಾನೆ. ಈ ವೇಳೆ ಹಟ್ಟಿಯಲ್ಲೇ ಮಲಗಿದ್ದ ಸುಂದರಪ್ಪ ಎಚ್ಚರಗೊಂಡು ಕೂಗಿಕೊಂಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ರಾಘವೇಂದ್ರನನ್ನು ಹಿಡಿದಿದ್ದಾರೆ. ಆತನೊಂದಿಗೆ ಬಂದಿದ್ದ ಉಳಿದ ಇಬ್ಬರು ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ. ಸಿಕ್ಕಿಬಿದ್ದ ಆರೋಪಿಯನ್ನು ಥಳಿಸಿ ಗ್ರಾಮಸ್ಥರು ವೆಪನಪಲ್ಲಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪರಾರಿಯಾಗಿರುವ ಇಬ್ಬರು ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ.
ಘಟನೆ ಸಂಬಂಧ ವೆಪನಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



