ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿ ಹೋಂಸ್ಟೇನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಸಾಯಿ ಸುರಭಿ ಪ್ರಕರಣದಲ್ಲಿ ತನಿಖೆಗೆ ಮಹತ್ವದ ಸಾಕ್ಷ್ಯ ಸಿಕ್ಕಿದೆ. ಸಾವಿಗೂ ಮುನ್ನ ಆಕೆ ಬರೆದಿದ್ದ ಗ್ರಾಟಿಟ್ಯೂಡ್ ಜರ್ನಲ್ ಇದೀಗ ಬಹಿರಂಗವಾಗಿದ್ದು, ಆಕೆಯ ಮನಸ್ಥಿತಿ, ಭವಿಷ್ಯದ ಕನಸುಗಳು ಹಾಗೂ ಹಳೆಯ ಸಂಬಂಧದ ಬಗ್ಗೆ ಬರೆದಿರುವ ಸಾಲುಗಳು ತನಿಖೆಗೆ ಹೊಸ ತಿರುವು ನೀಡಿವೆ.
2025ರ ಡಿಸೆಂಬರ್ 30ರಂದು ಬರೆದಿರುವ ದಿನಚರಿಯಲ್ಲಿ, ಸಂಜೀತ್ ಅಲಿಯಿಂದ ದೂರವಾದ ಬಳಿಕ ತನ್ನ ಬದುಕು ಬದಲಾಗಿದೆ ಎಂದು ಸುರಭಿ ಉಲ್ಲೇಖಿಸಿದ್ದಾಳೆ. ಜೀವ ಉಳಿದಿರುವುದಕ್ಕೆ, ಮತ್ತೊಂದು ಅವಕಾಶ ಸಿಕ್ಕಿರುವುದಕ್ಕೆ ಹಾಗೂ ತಪ್ಪುಗಳನ್ನು ತಿದ್ದಿಕೊಳ್ಳುವ ಅವಕಾಶ ದೊರೆತಿರುವುದಕ್ಕೆ ದೇವರಿಗೆ ಧನ್ಯವಾದ ಅರ್ಪಿಸಿದ್ದಾಳೆ.
ತನ್ನ ಹಿಂದಿನ ನಿರ್ಧಾರಗಳಿಂದ ಪಾಠ ಕಲಿತಿರುವುದಾಗಿ, ಕುಟುಂಬದೊಂದಿಗೆ ಹೊಸ ಬದುಕು ಕಟ್ಟಿಕೊಳ್ಳುವ ಆಶಯವಿದ್ದುದಾಗಿ ಹಾಗೂ ದೇವರ ಮೇಲಿನ ನಂಬಿಕೆ ಮತ್ತಷ್ಟು ಗಟ್ಟಿಯಾಗಿರುವುದಾಗಿ ಜರ್ನಲ್ನಲ್ಲಿ ದಾಖಲಿಸಿದ್ದಾಳೆ. ಈ ಬರಹಗಳು ಆಕೆ ಹೊಸ ಆರಂಭದ ನಿರೀಕ್ಷೆಯಲ್ಲಿದ್ದಳು ಎಂಬುದನ್ನು ಸೂಚಿಸುತ್ತವೆ.
ಆದರೆ ತನಿಖಾಧಿಕಾರಿಗಳ ಗಮನ ಸೆಳೆದಿರುವುದು ಜರ್ನಲ್ನಲ್ಲಿರುವ ಒಂದು ಮಹತ್ವದ ಸಾಲು. “ನನ್ನ ತಪ್ಪಾದ ಆಯ್ಕೆಯಿಂದ ದೂರವಿಟ್ಟಿದ್ದಕ್ಕೆ ಹಾಗೂ ದುಷ್ಟ ವ್ಯಕ್ತಿಯನ್ನು ಮದುವೆಯಾಗದಂತೆ ಕಾಪಾಡಿದ್ದಕ್ಕೆ ದೇವರಿಗೆ ಕೃತಜ್ಞತೆ” ಎಂದು ಸುರಭಿ ಬರೆದಿದ್ದಾಳೆ.
ಈ ಜರ್ನಲ್ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ಹೊಸ ಆಯಾಮ ಸಿಕ್ಕಿದ್ದು, ಆಕೆಯ ಸಾವಿನ ಹಿಂದಿನ ನೈಜ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಎಲ್ಲಾ ಸಾಧ್ಯತೆಗಳನ್ನೂ ಪರಿಶೀಲಿಸುತ್ತಿದ್ದಾರೆ. ಹೊಸ ಬದುಕಿನ ಕನಸು ಕಂಡಿದ್ದ ಯುವತಿಯ ಅಂತ್ಯ ಅನುಮಾನಾಸ್ಪದ ಸಾವಿನಲ್ಲಿ ಆಗಿರುವುದು ಪ್ರಕರಣವನ್ನು ಮತ್ತಷ್ಟು ಗಂಭೀರಗೊಳಿಸಿದೆ.



