ಮಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಆರೋಪ ಎದುರಿಸುತ್ತಿರುವ ಹಾಸನ ಜಿಲ್ಲೆಯ ಬೇಲೂರು ಬಿಜೆಪಿ ಶಾಸಕ ಹೆಚ್.ಕೆ. ಸುರೇಶ್, ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಆಣೆ-ಪ್ರಮಾಣ ಮಾಡುವ ಮೂಲಕ ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಬಳಿಕ ದೇವರ ಮುಂದೆ ಮುಷ್ಟಿ ಕಾಣಿಕೆ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದ ಸುರೇಶ್, “ನಾನು ಯಾವುದೇ ಅಡ್ಡಮತದಾನ ಮಾಡಿಲ್ಲ. ನನ್ನ ಮೇಲೆ ಕೇಳಿಬಂದಿರುವ ಆರೋಪಗಳು ಸತ್ಯವಲ್ಲ. ನಾನು ಈಗಲೂ ಬಿಜೆಪಿಯಲ್ಲಿದ್ದೇನೆ, ಮುಂದೆಯೂ ಬಿಜೆಪಿಯಲ್ಲೇ ಇರುತ್ತೇನೆ. ಶಾಸಕನಾದ ದಿನದಿಂದ ಪಕ್ಷದ ಪರವಾಗಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ” ಎಂದು ಪ್ರಮಾಣ ಮಾಡಿದರು.
ವಿಧಾನಪರಿಷತ್ ಚುನಾವಣೆಯ ಬಳಿಕ ಬಿಜೆಪಿ ಶಾಸಕರ ಕ್ರಾಸ್ ವೋಟಿಂಗ್ ಕುರಿತು ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ, ಧರ್ಮಸ್ಥಳದಲ್ಲಿ ದೇವರ ಸನ್ನಿಧಿಯಲ್ಲಿ ಆಣೆ-ಪ್ರಮಾಣ ಮಾಡುವ ಮೂಲಕ ಸುರೇಶ್ ತಮ್ಮ ನಿಲುವನ್ನು ಬಹಿರಂಗಪಡಿಸಿದ್ದಾರೆ.



