ಹಾಸನ: ನಿಯಂತ್ರಣ ತಪ್ಪಿದ ಕಾರೊಂದು ಅಡಿಕೆ ತೋಟಕ್ಕೆ ಬಿದ್ದು ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಲಿಂಗಾಪುರ ಗ್ರಾಮದ ಬಳಿ ನಡೆದಿದೆ. ಮಂಗಳೂರಿನಿಂದ ಬೇಲೂರು ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರು, ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಡಿಕೆ ತೋಟಕ್ಕೆ ಉರುಳಿಬಿದ್ದಿದೆ.
ಘಟನೆಯಲ್ಲಿ ಕಾರು ಚಾಲಕ ಮಹಮದ್ (30) ಗಾಯಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಬಿದ್ದ ತೀವ್ರತೆಗೆ ತೋಟದಲ್ಲಿದ್ದ ಮೂರು ಅಡಿಕೆ ಮರಗಳು ಮುರಿದು ಹೋಗಿವೆ. ಇನ್ನೋವಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಘಟನೆ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.



