ಸಿಡ್ನಿ: ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಪ್ರಕರಣದಲ್ಲಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರನ್ನು ಸಿಡ್ನಿಯ ವೇವರ್ಲಿ ಸ್ಥಳೀಯ ನ್ಯಾಯಾಲಯ ತಪ್ಪಿತಸ್ಥರೆಂದು ಘೋಷಿಸಿದೆ. ಪ್ರಕರಣದಲ್ಲಿ ವಾರ್ನರ್‌ಗೆ 1,500 ಆಸ್ಟ್ರೇಲಿಯನ್ ಡಾಲರ್‌ಗಳ ದಂಡ ವಿಧಿಸಲಾಗಿದ್ದು, ವಾಹನ ಚಲಾಯಿಸಲು ಕಠಿಣ ಷರತ್ತುಗಳನ್ನು ಕೂಡ ನ್ಯಾಯಾಲಯ ವಿಧಿಸಿದೆ.
ಏಪ್ರಿಲ್ 5ರಂದು ಈಸ್ಟರ್ ದಿನದಂದು ಡೇವಿಡ್ ವಾರ್ನರ್ ಮದ್ಯಪಾನ ಮಾಡಿ ಕಾರು ಚಲಾಯಿಸುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಪೊಲೀಸರನ್ನು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಅವರು ಕಾರನ್ನು ನಿಲ್ಲಿಸಿ, ತಮ್ಮೊಂದಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಂದಿಗೆ ಆಸನಗಳನ್ನು ಬದಲಾಯಿಸಲು ಯತ್ನಿಸಿದ್ದರು ಎಂದು ಪ್ರಕರಣದ ವಿಚಾರಣೆಯಲ್ಲಿ ತಿಳಿದುಬಂದಿದೆ.
ಪೊಲೀಸರು ವಾರ್ನರ್ ಅವರನ್ನು ವಶಕ್ಕೆ ಪಡೆದು ಮದ್ಯಪಾನ ಪರೀಕ್ಷೆ ನಡೆಸಿದಾಗ, ಅವರ ದೇಹದಲ್ಲಿನ ಆಲ್ಕೋಹಾಲ್ ಪ್ರಮಾಣ ಕಾನೂನುಬದ್ಧ ಮಿತಿಗಿಂತ ಎರಡು ಪಟ್ಟು ಹೆಚ್ಚಾಗಿತ್ತು ಎಂಬುದು ದೃಢಪಟ್ಟಿದೆ.
ಈ ಪ್ರಕರಣದ ಅಂತಿಮ ವಿಚಾರಣೆ ಸಿಡ್ನಿಯ ವೇವರ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ನಡೆದಿದ್ದು, ಘಟನೆಯ ಸಂದರ್ಭದಲ್ಲಿ ಕಾರಿನಲ್ಲಿ ಮಕ್ಕಳು ಕೂಡ ಇದ್ದರು ಎಂಬ ಅಂಶವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ವಾರ್ನರ್ ಅವರ ವಾಹನಕ್ಕೆ 12 ತಿಂಗಳ ಕಾಲ ಬ್ರೀಥಲೈಜರ್ ಲಾಕ್ ಸಾಧನವನ್ನು ಅಳವಡಿಸುವಂತೆ ನ್ಯಾಯಾಲಯ ಆದೇಶಿಸಿದೆ.
ವಿಚಾರಣೆ ವೇಳೆ ವಾರ್ನರ್ ಪರ ವಕೀಲರು, ಪ್ರಕರಣಕ್ಕೆ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ದೊರೆತಿರುವುದರಿಂದ ವಾರ್ನರ್ ಈಗಾಗಲೇ ಸಾಕಷ್ಟು ನಷ್ಟ ಅನುಭವಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಈ ಪ್ರಕರಣವು ಅವರ ವಾಣಿಜ್ಯ ಒಪ್ಪಂದಗಳ ಮೇಲೂ ಪರಿಣಾಮ ಬೀರಬಹುದು. ವಿಶೇಷವಾಗಿ ಭಾರತ ಮತ್ತು ಬಾಂಗ್ಲಾದೇಶ ಸೇರಿದಂತೆ ವಿವಿಧ ದೇಶಗಳಲ್ಲಿನ ಟಿ20 ಫ್ರಾಂಚೈಸಿ ಲೀಗ್‌ಗಳಲ್ಲಿ ಆಡುವ ಅವಕಾಶಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಾದಿಸಿದರು.
ಆದರೆ, ನ್ಯಾಯಾಧೀಶ ಕ್ಲೇರ್ ಫರ್ನಾನ್ ಈ ವಾದಗಳನ್ನು ತಿರಸ್ಕರಿಸಿದರು. ಸಾರ್ವಜನಿಕ ಸುರಕ್ಷತೆಯೇ ನ್ಯಾಯಾಲಯದ ಮೊದಲ ಆದ್ಯತೆ ಎಂದು ಅವರು ಸ್ಪಷ್ಟಪಡಿಸಿದರು. ಅದರಲ್ಲೂ ಘಟನೆಯ ಸಂದರ್ಭದಲ್ಲಿ ಕಾರಿನಲ್ಲಿ ಮಕ್ಕಳು ಇದ್ದರು ಎಂಬುದನ್ನು ನ್ಯಾಯಾಧೀಶರು ಪ್ರಮುಖವಾಗಿ ಪರಿಗಣಿಸಿದರು.
ಏನಿದು ಬ್ರೀಥಲೈಜರ್ ಲಾಕ್?
ನ್ಯಾಯಾಲಯದ ಆದೇಶದಂತೆ ಡೇವಿಡ್ ವಾರ್ನರ್ ಅವರ ಕಾರಿನಲ್ಲಿ 12 ತಿಂಗಳ ಕಾಲ ಬ್ರೀಥಲೈಜರ್ ಲಾಕ್ ಸಾಧನ ಅಳವಡಿಸಲಾಗುತ್ತದೆ. ಇದು ವಾಹನದ ಡ್ಯಾಶ್‌ಬೋರ್ಡ್‌ನಲ್ಲಿ ಅಳವಡಿಸುವ ಸುರಕ್ಷತಾ ಸಾಧನವಾಗಿದ್ದು, ಕಾರು ಸ್ಟಾರ್ಟ್ ಮಾಡುವ ಮೊದಲು ಚಾಲಕ ತನ್ನ ಉಸಿರಿನ ಮಾದರಿಯನ್ನು ನೀಡಬೇಕಾಗುತ್ತದೆ.
ಚಾಲಕನ ಉಸಿರಿನಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಆಲ್ಕೋಹಾಲ್ ಪತ್ತೆಯಾದರೆ, ಸಾಧನವು ಕಾರಿನ ಎಂಜಿನ್ ಸ್ಟಾರ್ಟ್ ಆಗುವುದನ್ನು ತಡೆಯುತ್ತದೆ. ಹೀಗಾಗಿ ವಾರ್ನರ್ ಮುಂದಿನ 12 ತಿಂಗಳು ಈ ಸಾಧನ ಅಳವಡಿಸಿರುವ ವಾಹನದಲ್ಲೇ ಚಾಲನೆ ಮಾಡಬೇಕಾಗುತ್ತದೆ.



