ಬೆಂಗಳೂರು: ಫುಟ್ಪಾತ್ ಮೇಲೆ ವಾಹನ ಚಲಾಯಿಸುವ ಸವಾರರಿಗೆ ಇನ್ಮುಂದೆ ಭಾರಿ ದಂಡ ಬೀಳುವ ಸಾಧ್ಯತೆ ಇದೆ. ನಿಯಮ ಉಲ್ಲಂಘಿಸುವವರಿಗೆ ಈಗಿರುವ ದಂಡಕ್ಕಿಂತ ಹಲವು ಪಟ್ಟು ಹೆಚ್ಚಿಸಲು ಸಾರಿಗೆ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಸದ್ಯ ಫುಟ್ಪಾತ್ ಮೇಲೆ ವಾಹನ ಚಲಾಯಿಸಿದರೆ ₹500 ದಂಡ ವಿಧಿಸಲಾಗುತ್ತಿದೆ. ಆದರೆ ಮುಂಬರುವ ದಿನಗಳಲ್ಲಿ ಮೊದಲ ಬಾರಿ ಈ ನಿಯಮ ಉಲ್ಲಂಘನೆ ಮಾಡಿದವರಿಗೆ ₹5,000ಕ್ಕೆ ಹೆಚ್ಚಿಸುವಂತೆ ಸಾರಿಗೆ ಇಲಾಖೆ ಪ್ರಸ್ತಾವನೆ ನೀಡಿದೆ. ಇದೇ ನಿಯಮವನ್ನು ಎರಡನೇ ಬಾರಿ ಉಲ್ಲಂಘಿಸಿದರೆ ₹10,000 ದಂಡ ವಿಧಿಸುವಂತೆ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ಯಾವುದೇ ರೀತಿಯ ವಾಹನವನ್ನು ಫುಟ್ಪಾತ್ ಮೇಲೆ ಚಲಾಯಿಸಿದರೂ ಈ ದಂಡ ಅನ್ವಯಿಸುವ ಸಾಧ್ಯತೆ ಇದೆ.
ಬೆಂಗಳೂರಿನ ಹಲವು ಭಾಗಗಳಲ್ಲಿ ಫುಟ್ಪಾತ್ ಮೇಲೆ ವಾಹನಗಳ ಸಂಚಾರ ಹೆಚ್ಚಾಗಿದ್ದು, ಇದರಿಂದ ಪಾದಚಾರಿಗಳು ರಸ್ತೆಗೆ ಇಳಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿ ಅಪಘಾತದ ಆತಂಕವೂ ಎದುರಾಗಿದೆ. ಈ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ದಂಡ ಹೆಚ್ಚಿಸುವ ಪ್ರಸ್ತಾವನೆಯನ್ನು ಸಾರಿಗೆ ಇಲಾಖೆ ಸಿದ್ಧಪಡಿಸಿದೆ.
ಈ ಸಂಬಂಧ ಸಾರಿಗೆ ಆಯುಕ್ತರು ಸರ್ಕಾರದ ಸಾರಿಗೆ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಪ್ರಸ್ತಾವನೆಗೆ ಕಾನೂನು ಇಲಾಖೆಯ ಅಭಿಪ್ರಾಯ ಪಡೆದ ಬಳಿಕ ಅಂತಿಮ ಆದೇಶ ಹೊರಡಿಸಬಹುದು ಎಂದು ಸಾರಿಗೆ ಇಲಾಖೆ ತಿಳಿಸಿದೆ. ಸರ್ಕಾರದ ಅಂತಿಮ ಆದೇಶದ ಬಳಿಕವಷ್ಟೇ ಹೊಸ ದಂಡ ಮೊತ್ತ ಜಾರಿಗೆ ಬರಲಿದೆ.



