ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಂಡಿದ್ದು, ಮತ್ತೆ ಇಬ್ಬರು ಜೈಲು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. ಡಿಐಜಿ ಜಿನೇಂದ್ರ ಖನಗಾವಿ ಅವರು ತನಿಖೆ ತೀವ್ರಗೊಳಿಸಿದ್ದು, ಪ್ರಜ್ವಲ್ಗೆ ಮೊಬೈಲ್ ಕೊಟ್ಟವರು ಯಾರು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
ಡಿಐಜಿ ಜಿನೇಂದ್ರ ಖನಗಾವಿ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಜೈಲು ಎಸ್ಪಿ ಅನ್ಷುಕುಮಾರ್ ಅವರ ಹೇಳಿಕೆ ದಾಖಲಿಸಲಾಗಿದೆ. ಬ್ಯಾರಕ್ ವಿಸಿಟ್ ವೇಳೆ ಯಾವುದೇ ಅಕ್ರಮಗಳು ಕಂಡುಬಂದಿರಲಿಲ್ಲ, ಮೊಬೈಲ್ ಯಾರು ಕೊಟ್ಟರು ಎಂಬುದು ತಮಗೆ ಗೊತ್ತಿಲ್ಲ ಎಂದು ಎಸ್ಪಿ ಹೇಳಿಕೆ ನೀಡಿದ್ದಾರೆ. ಪ್ರಜ್ವಲ್ ರೇವಣ್ಣ ಜೈಲಿನ ಯೂನಿಫಾರ್ಮ್ ಧರಿಸದ ಬಗ್ಗೆ ಎಎಸ್ಪಿಗೆ ನಿಗಾ ವಹಿಸುವಂತೆ ಸೂಚಿಸಿದ್ದೆ, ಜೈಲು ನಿಯಮಾವಳಿಗಳನ್ನು ಎಲ್ಲರೂ ಪಾಲಿಸುವಂತೆ ಎಚ್ಚರಿಕೆ ನೀಡಿ, ಯಾರಿಗೂ ವಿನಾಯಿತಿ ನೀಡದಂತೆ ಸೂಚಿಸಿದ್ದೆ ಎಂದು ಎಸ್ಪಿ ತಿಳಿಸಿದ್ದಾರೆ.
ಎಸ್ಪಿಗೆ ನೀಡಲಾಗಿದ್ದ ಶೋಕಾಸ್ ನೋಟಿಸ್ಗೆ ಉತ್ತರ ಪಡೆದ ಡಿಐಜಿ ಜಿನೇಂದ್ರ ಖನಗಾವಿ, ಸ್ಟೇಟ್ಮೆಂಟ್ ದಾಖಲಿಸಿ ವಾರದೊಳಗೆ ಅಕ್ರಮದ ವರದಿ ನೀಡಲು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಉಳಿದ ಮೂರು ದಿನಗಳಲ್ಲಿ ಜೈಲು ಡಿಐಜಿ ಹೇಳಿಕೆ ಹಾಗೂ ಸಾಕ್ಷಿಗಳ ಸಂಗ್ರಹ ಪೂರ್ಣಗೊಳಿಸಲಿದ್ದು, ಆ ಬಳಿಕ ಜೈಲು ಅಕ್ರಮದ ಬಗ್ಗೆ ಡಿಜಿಪಿಗೆ ವರದಿ ಸಲ್ಲಿಸಲಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಜೈಲರ್ ರಮೇಶ್ ಧರ್ಮಟ್ಟಿ ಹಾಗೂ ವಾರ್ಡರ್ ಮಹೇಶ್ ಸಜ್ಜನ್ ಅವರನ್ನು ಅಮಾನತುಗೊಳಿಸಿ ಡಿಜಿಪಿ ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಪ್ರಜ್ವಲ್ ರೇವಣ್ಣ ಸೆಲ್ನಲ್ಲಿ ಮೊಬೈಲ್ ಪತ್ತೆಯಾಗಿದ್ದು, ಕಾರಾಗೃಹ ಮತ್ತು ಸುಧಾರಣಾ ಇಲಾಖೆಗೆ ಭಾರಿ ಮುಜುಗರ ಉಂಟುಮಾಡಿತ್ತು. ಈ ಪ್ರಕರಣದ ಬಳಿಕ ವಿಶೇಷ ಭದ್ರತಾ ವಿಭಾಗದ ಬ್ಯಾರಕ್ನಿಂದ ಸಾಮಾನ್ಯ ಕೈದಿಗಳ ಬ್ಯಾರಕ್ಗೆ ಅವರನ್ನು ಅಧಿಕಾರಿಗಳು ಸ್ಥಳಾಂತರಿಸಿದ್ದು, ಈಗ ಸಾಮಾನ್ಯ ಕೈದಿ ಜೀವನ ನಡೆಸಬೇಕಾದ ಸಂಕಷ್ಟ ಎದುರಾಗಿದೆ.



