ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿ ತಾಂಡದಲ್ಲಿ 2017ರಲ್ಲಿ ನಡೆದಿದ್ದ ಭೀಕರ ದರೋಡೆ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದ್ದ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಈ ಪ್ರಕರಣದಲ್ಲಿ ಹಶ್ಯಾ ಅಲಿಯಾಸ್ ರಮೇಶ್‌ಗೆ ಜೀವಾವಧಿ ಶಿಕ್ಷೆಯ ಜೊತೆಗೆ 30 ಸಾವಿರ ರೂ. ದಂಡ ವಿಧಿಸಲಾಗಿದೆ. ಕದ್ದ ಚಿನ್ನಾಭರಣವನ್ನು ಖರೀದಿಸುತ್ತಿದ್ದ ಮೌನೇಶ್‌ಗೆ 2 ವರ್ಷಗಳ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ರಾಯಚೂರಿನ 2ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಘಟನೆ ವೇಳೆ ದರೋಡೆಯನ್ನು ತಡೆಯಲು ಮುಂದಾದ ಮನೆ ಮಾಲೀಕ ಡಾಕ್ಯಾನಾಯಕ್ ಅವರ ಎದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ದರೋಡೆ ಕೃತ್ಯವನ್ನು ಮೂವರು ಪುರುಷರು ಮತ್ತು ಇಬ್ಬರು ಮಹಿಳೆಯರನ್ನು ಒಳಗೊಂಡ ಐದು ಸದಸ್ಯರ ಪಾರ್ದಿ ಗ್ಯಾಂಗ್ ನಡೆಸಿತ್ತು. ಆರೋಪಿಗಳು ಸುಮಾರು 50 ಸಾವಿರ ರೂ. ನಗದು ಮತ್ತು 30,400 ರೂ. ಮೌಲ್ಯದ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದರು.
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪರ್ಲಿ ಮೂಲದ ಈ ಗ್ಯಾಂಗ್ ಸದಸ್ಯರನ್ನು ಪೊಲೀಸರು ಬಂಧಿಸಿದ್ದರು. ಆದರೆ, ಇಸ್ರಾಮ್ ಮತ್ತು ಪಲ್ಲು ಗೋವಿಂದ ಎಂಬ ಆರೋಪಿಗಳು ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ತಪ್ಪಿಸಿಕೊಂಡು ಪರಾರಿಯಾಗಿದ್ದು, ಇನ್ನೂ ಪತ್ತೆಯಾಗಿಲ್ಲ.
ಇದಲ್ಲದೆ, ಮಹಿಳಾ ಆರೋಪಿಗಳಾದ ಗೌರಿತಾಯಿ ಮತ್ತು ಶಿಶಬಾಯಿ ಜಾಮೀನು ಪಡೆದ ಬಳಿಕ ನಾಪತ್ತೆಯಾಗಿದ್ದಾರೆ. ಹೀಗಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಇಬ್ಬರು ಆರೋಪಿಗಳಿಗೆ ಮಾತ್ರ ಶಿಕ್ಷೆ ಪ್ರಕಟವಾಗಿದೆ.
ಪೊಲೀಸ್ ತನಿಖೆಯಲ್ಲಿ, ಈ ಅಲೆಮಾರಿ ಗ್ಯಾಂಗ್ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಕಳ್ಳತನ ನಡೆಸಿ, ಕದ್ದ ಚಿನ್ನಾಭರಣವನ್ನು ಮೌನೇಶ್‌ಗೆ ನೀಡುತ್ತಿದ್ದು, ಹಣ ಪಡೆಯುತ್ತಿದ್ದುದಾಗಿ ಬಹಿರಂಗವಾಗಿದೆ. 2017ರಲ್ಲಿ ಈ ಗ್ಯಾಂಗ್ ಹಾವಳಿ ಜಿಲ್ಲೆಯ ಜನರಲ್ಲಿ ಭೀತಿ ಹುಟ್ಟಿಸಿತ್ತು.



