ಗದಗ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಗದಗ ಜಿಲ್ಲೆಯ ಕಲ್ಲಂಗಡಿ ಬೆಳೆಗಾರರ ಮೇಲೆ ಭಾರೀ ಪರಿಣಾಮ ಬೀರಿದೆ. ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದಲ್ಲಿ ಕಟಾವು ಮಾಡಿದ ಕಲ್ಲಂಗಡಿ ಮಾರಾಟವಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಾಗಡಿ ಗ್ರಾಮ ಕಲ್ಲಂಗಡಿ ಬೆಳೆಗೆ ಪ್ರಸಿದ್ಧಿಯಾಗಿದ್ದು, ಈ ಬಾರಿ ಆಲಿಕಲ್ಲು ಮಳೆಯಿಂದ ಬೆಳೆ ಹಾನಿಯಾಗಿದ್ದರೂ ರೈತರು ಕಟಾವು ಮಾಡಿಕೊಂಡಿದ್ದರು. ಆದರೆ ಇದೀಗ ವ್ಯಾಪಾರಸ್ಥರು ಖರೀದಿಗೆ ಮುಂದೆ ಬರುತ್ತಿಲ್ಲ. ಇದರಿಂದ ಜಮೀನಿನಲ್ಲಿ ಶೇಖರಣೆ ಮಾಡಿಕೊಂಡಿರುವ ಕಲ್ಲಂಗಡಿ ಕೊಳೆತು ಹೋಗುತ್ತಿರುವುದು ರೈತರ ಕಳವಳಕ್ಕೆ ಕಾರಣವಾಗಿದೆ.
ಇದುವರೆಗೆ ವ್ಯಾಪಾರಸ್ಥರು ಕಲ್ಲಂಗಡಿಯನ್ನು ಬೇರೆ ರಾಜ್ಯಗಳು ಹಾಗೂ ವಿದೇಶಗಳಿಗೆ ರಫ್ತು ಮಾಡುತ್ತಿದ್ದರು. ಆದರೆ ಯುದ್ಧದ ಪರಿಣಾಮದಿಂದ ರಫ್ತು ವ್ಯವಸ್ಥೆ ಸಂಪೂರ್ಣ ಕುಂಠಿತಗೊಂಡಿದ್ದು, ಸ್ಥಳೀಯ ಮಾರುಕಟ್ಟೆಯಲ್ಲೂ ಬೇಡಿಕೆ ಕುಸಿದಿದೆ.
ಮಾಗಡಿ ಗ್ರಾಮದ ಗೋಪಾಲಗೌಡ ಭರಮಗೌಡ್ರು ಎಂಬ ರೈತನು ನಾಲ್ಕು ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆ ಬೆಳೆದಿದ್ದು, ಸುಮಾರು ನಾಲ್ಕು ರಿಂದ ಐದು ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾನೆ. ಸುಮಾರು 50ರಿಂದ 60 ಟನ್ ಕಲ್ಲಂಗಡಿ ಕಟಾವು ಮಾಡಿಕೊಂಡಿದ್ದರೂ ಮಾರಾಟವಾಗದೇ ಜಮೀನಿನಲ್ಲೇ ಹಾಳಾಗುತ್ತಿದೆ ಎಂದು ಆತ ಆತಂಕ ವ್ಯಕ್ತಪಡಿಸಿದ್ದಾನೆ.
“ಯುದ್ಧದ ಪರಿಣಾಮವಾಗಿ ಕಲ್ಲಂಗಡಿ ಯಾರೂ ಖರೀದಿ ಮಾಡುತ್ತಿಲ್ಲ. ನಾವು ಬೆಳೆದ ಬೆಳೆ ಕಣ್ಣೆದುರೇ ನಾಶವಾಗುತ್ತಿದೆ” ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ರೈತರಿಗೆ ನೆರವು ನೀಡಬೇಕು ಎಂಬುದು ರೈತರ ಒತ್ತಾಯವಾಗಿದೆ.



