ಬೆಂಗಳೂರು: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ಬಿಜೆಪಿಗೆ ದೊಡ್ಡ ಅಂತರದ ಗೆಲುವು ಸಿಗಲಿದೆ. ಕಾಂಗ್ರೆಸ್ಗೆ ಎರಡೂ ಕಡೆ ಸಮಸ್ಯೆಗಳಿವೆ. ದಾವಣಗೆರೆಯಲ್ಲಿ ಮುಸ್ಲಿಮರು ಓಟ್ ಹಾಕಲ್ಲ ಅಂತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಹೇಳಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಸೋಲುವ ಸುಳಿವು ಸಿಕ್ಕ ಕೂಡಲೇ ಕೇರಳಕ್ಕೆ ಹೋದ ಮುಖ್ಯಮಂತ್ರಿ ಬಾಗಲಕೋಟೆಗೆ ದೌಡಾಯಿಸಿದ್ದಾರೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಭವೃದ್ಧಿ ಮಾಡಿದ್ದರೆ, ಗ್ಯಾರಂಟಿಗಳನ್ನು ಸರಿಯಾಗಿ ಕೊಟ್ಟಿದ್ದರೆ ಇಷ್ಟು ಕಷ್ಟ ಯಾಕೆ ಪಡಬೇಕಿತ್ತು. ಇವರು ಅಭಿವೃದ್ಧಿ ಮಾಡಿದ್ದರೆ ಜನರೇ ಹತ್ತಿರ ಬಂದು ನಿಮಗೆ ಓಟ್ ಹಾಕುತ್ತೇವೆ ಅಂತ ಹೇಳುತ್ತಿದ್ದರು. ಆದರೆ ಹಾಗೆ ಇಲ್ಲ ಎಂದರು.
ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಏನೂ ಆಗಿಲ್ಲ. ಅಭಿವೃದ್ಧಿ ಶೂನ್ಯವಾಗಿದೆ. ಸಾಲಗಾರರ ರಾಜ್ಯವನ್ನಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದರು. ಅಭಿವೃದ್ಧಿ ಹೋಗಲಿ; ಗ್ಯಾರಂಟಿ ಸಹ ಸರಿಯಾಗಿ ಕೊಡಲಿಲ್ಲ. ಅನ್ನಭಾಗ್ಯವನ್ನು ಕನ್ನಭಾಗ್ಯ ಮಾಡಿದ್ದಾರೆ. ಕಾಂಗ್ರೆಸ್ ಅಭಿವೃದ್ಧಿ ವಿರೋಧಿ ಆಗಿರುವುದಿಂದ ಜನರೇ ಪಾಠ ಕಲಿಸಲಿದ್ದಾರೆ ಎಂದು ವಿಶ್ಲೇಷಿಸಿದರು.
ಎರಡೂ ಕಡೆ ಕಾಂಗ್ರೆಸ್ ನವರೇ ಬಂದು ಒಳಗೊಳಗೆ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. ದಾವಣಗೆರೆಯಲ್ಲಿ ಬಡವರನ್ನು ಗೆಲ್ಲಿಸಿ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ದಾವಣಗೆರೆಯ ಬಿಜೆಪಿ ಅಭ್ಯರ್ಥಿ ಬಡವರು. ಆದ್ದರಿಂದ ಸಿದ್ದರಾಮಯ್ಯ ಸಹ ನಮ್ಮ ಪರ ಪ್ರಚಾರ ಮಾಡಿದ್ದಾರೆ ಎಂದು ನುಡಿದರು.
ಅಡುಗೆ ಅನಿಲ ಸಮಸ್ಯೆ ಇಡೀ ದೇಶಕ್ಕೆ ಆಗಿದೆ. ನಮ್ಮ ದೇಶದಲ್ಲಿ ಮಾತ್ರವಲ್ಲ. ರಾಹುಲ್ ಗಾಂಧಿ ಅವರು ಮೆಚ್ಚುವ ದೇಶ ಪಾಕಿಸ್ತಾನದಲ್ಲಿ ಪೆಟ್ರೋಲ್ 500 ರೂ. ಆಗಿದೆ. ಇದೆಲ್ಲ ತಿಳಿಯದ ಡಿ.ಕೆ ಶಿವಕುಮಾರ್ ಅವರು ಗ್ಯಾಸ್ ಸಮಸ್ಯೆಗೆ ಪ್ರಧಾನಿ ಮೋದಿ ಕಾರಣ ಎಂದು ಟೀಕೆ ಮಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಹೇಳಿದರು.



