ಬೆಂಗಳೂರು/ವಿಜಯಪುರ: ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಬ್ಲಾಕ್‌ಮೇಲ್ ಆರೋಪ ಹೊರಬಿದ್ದ ಪ್ರಕರಣ ಈಗ ಭಾರೀ ಸಂಚಲನ ಮೂಡಿಸಿದೆ. ಮಹಿಳಾ ಆಯೋಗಕ್ಕೆ ದೂರು ನೀಡಿದ್ದ ಸಂತ್ರಸ್ತೆ ದಿಢೀರ್ ನಾಪತ್ತೆಯಾಗಿದ್ದು, ಪೊಲೀಸರು ಎಷ್ಟೇ ಹುಡುಕಾಡುತ್ತರೂ ಸಹ ಸಂಪರ್ಕಕ್ಕೆ ಸಿಗುತ್ತಿಲ್ಲ.
ಮಹಿಳೆ ಹೇಳಿಕೆಯಲ್ಲಿ, ಸ್ವಾಮೀಜಿಯವರಿಂದ ಅಸಭ್ಯವಾಗಿ ವರ್ತಿಸಿ, ಆ ವಿಡಿಯೋವನ್ನು ಹಿಡಿದು ಪ್ರತಿನಿತ್ಯ ಬೆತ್ತಲೆ ವೀಡಿಯೋ ಕಾಲ್ ಮೂಲಕ ಬ್ಲಾಕ್‌ಮೇಲ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ, ಸ್ವಾಮೀಜಿಯ ವಿರುದ್ಧ ದಾಖಲಾಗಿದ್ದ ಆರೋಪಗಳೊಂದಿಗೆ, ಮಹಿಳೆಯು ನಿಗೂಢವಾಗಿ ತಲೆಮರೆಸಿರುವುದು ಪ್ರಕರಣದ ಗಂಭೀರತೆಯನ್ನು ತೀವ್ರಗೊಳಿಸಿದೆ.
ಇದಕ್ಕೆ ಪ್ರತಿಯಾಗಿ, ಸ್ವಾಮೀಜಿ ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಹನಿಟ್ರ್ಯಾಪ್ ದೂರು ದಾಖಲಿಸಿದ್ದು, ಮಹಿಳೆಯು ಅನಾಥಾಶ್ರಮ ನಡೆಸುತ್ತಿರುವುದಾಗಿ ಸುಳ್ಳು ಹೇಳಿ ಪರಿಚಯ ಮಾಡಿಕೊಂಡು 3 ಕೋಟಿ ರೂಪಾಯಿ ನೀಡಲು ಬ್ಲಾಕ್‌ಮೇಲ್ ಮಾಡುತ್ತಿದ್ದಾಳೆ ಎಂದು ಉಲ್ಲೇಖಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರ ತಂಡ ಬೆಂಗಳೂರಿನೊಂದಿಗೆ ಮಂಡ್ಯ, ವಿಜಯಪುರ ಮತ್ತು ಪಕ್ಕದ ರಾಜ್ಯಗಳಲ್ಲಿ ಕಾರ್ಯಚರಣೆ ನಡೆಸುತ್ತಿದೆ.
ಇತ್ತೀಚೆಗೆ ಸ್ವಾಮೀಜಿಯದ್ದು ಎನ್ನಲಾದ ಖಾಸಗಿ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವುದು ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡಿದೆ. ಪೊಲೀಸ್ ತನಿಖೆ ಮುಂದುವರಿದಿದ್ದು, ಅಂತಿಮವಾಗಿ ಪ್ರಕರಣ ಯಾವ ಹಂತದಲ್ಲಿ ನಿಲ್ಲುತ್ತದೆ ಎಂಬುದು ಕಾದು ನೋಡಬೇಕಾಗಿದೆ.



