ಬೆಂಗಳೂರು: ಬಸವ ಜಯಂತಿಯ ಅಂಗವಾಗಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಫೌಂಡೇಶನ್ ಸಹಯೋಗದಲ್ಲಿ ಯುವೋತ್ಸವ- ಉದ್ಯೋಗ ಮೇಳ 2026 ಅನ್ನು ಮಲ್ಲೇಶ್ವರಂನ ಎಸ್‍ಎಚ್‍ವಿಎನ್‍ಎಂ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿಗಳು ಮತ್ತು ಶಾಸಕರಾದ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ಅವರು ತಿಳಿಸಿದರು.
ಮಲ್ಲೇಶ್ವರಂನ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಯಕವೇ ಕೈಲಾಸ ಎಂಬ ತತ್ವವನ್ನು ಜಗತ್ತಿಗೆ ನೀಡಿದ ಭಕ್ತಿ ಭಂಡಾರಿ ಬಸವಣ್ಣನವರನ್ನು ನಾವು ಪೂಜಿಸುತ್ತೇವೆ, ಆರಾಧಿಸುತ್ತೇವೆ. ಆದ್ದರಿಂದ ಅವರ ಜಯಂತಿಯ ಅಂಗವಾಗಿ ಈ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಹೇಳಿದರು.
ಮಲ್ಲೇಶ್ವರ ವಿಧಾನ ಸಭಾ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಉದ್ಯೋಗಮೇಳವನ್ನು ಆಯೋಜನೆ ಮಾಡುತ್ತಾ ಬಂದಿದ್ದೇವೆ.
ಇದರಿಂದ ಸಾಕಷ್ಟು ಉದ್ಯೋಗಾಕಾಂಕ್ಷಿಗಳಿಗೆ ಸಹಾಯವಾಗಿದೆ. ಈ ಬಾರಿ ಬೆಳಗ್ಗೆ 8.30 ರಿಂದ ಸಂಜೆ 4.30 ಉದ್ಯೋಗ ಮೇಳ ಆಯೋಜನೆ ಮಾಡಿದ್ದೇವೆ. ಸರ್ವರಿಗೂ ಉದ್ಯೋಗ ಎಂಬ ಧ್ಯೇಯವಾಕ್ಯದಲ್ಲಿ ಈ ಉದ್ಯೋಗಮೇಳವು ನಡೆಯಲಿದೆ. ಭಾರತ್ ಕರಿಯರ್ ಕನೆಕ್ಟ್ ಈ ಮೇಳಕ್ಕೆ ಕೈ ಜೋಡಿಸಿದೆ ಎಂದರು.
ಯುವ ಸಬಲೀಕರಣಕ್ಕೆ ಸಹಾಯವಾಗಬಲ್ಲ ವೃತ್ತಿ ಮಾರ್ಗದರ್ಶನ, ಕೌಶಲ್ಯ ಅಭಿವೃದ್ಧಿ ತರಬೇತಿ, ಉದ್ಯೋಗಮೇಳ, ಉದ್ಯಮಶೀಲತಾ ಅಭಿವೃದ್ಧಿ ಮತ್ತು ಆರ್ಥಿಕ ಸೇರ್ಪಡೆ ಇವುಗಳ ಕುರಿತು ಮಾಹಿತಿ ನೀಡಲಾಗುವುದು ಎಂದು ವಿವರಿಸಿದರು.
ಉದ್ಯೋಗಾಕಾಂಕ್ಷಿಗಳಿಗೆ ಅಗತ್ಯವಾದ ನೇರಸಂವಾದ, ನೇಮಕಾತಿ, ವೃತ್ತಿ ಅನ್ವೇಷಣೆಗೆ ಸಾಮಾನ್ಯ ವೇದಿಕೆಯನ್ನು ಈ ಮೇಳ ಒದಗಿಸಲಿದೆ. ಐಟಿ, ಉತ್ಪಾದನೆ, ಬ್ಯಾಂಕಿಂಗ್, ಆರೋಗ್ಯ, ಚಿಲ್ಲರೆ ವ್ಯಾಪಾರ, ಲಾಜಿಸ್ಟಿಕ್ ಮತ್ತು ಸೇವಾ ಕ್ಷೇತ್ರಗಳ ಸುಮಾರು 100 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ ಎಂದರು.
ಈ ಮೇಳ ಸುಮಾರು 5000 ಕ್ಕೂ ಹೆಚ್ಚು ಉದ್ಯೋಗಾವಕಾಶಗಳಿಗೆ ವೇದಿಕೆ ಒದಗಿಸಲಿದೆ. ಪಿಯುಸಿ, ಐಟಿಐ, ಡಿಪ್ಲೋಮಾ, ಪದವಿ, ಸ್ನಾತಕೋತ್ತರ ವಿದ್ಯಾರ್ಹತೆ ಇರುವವರು, ಸದ್ಯ ಈ ಕೋರ್ಸ್ ಮಾಡುತ್ತಿರುವವರು ಭಾಗವಹಿಸಬಹುದು. ಕನಿಷ್ಠ ಸಾವಿರ ಆಕಾಂಕ್ಷಿಗಳಿಗೆ ಕೌಶಲ್ಯ ಅಭಿವೃದ್ಧಿ, ಕೌಶಲ್ಯ ಉನ್ನತೀಕರಣ, ಪ್ರಶಿಕ್ಷಣ, ಸ್ವಯಂ ಉದ್ಯೋಗ, ಉದ್ಯಮಶೀಲತೆ, ಜೀವನೋಪಾಯ ಮತ್ತು ಇತರ ಕ್ಷೇತ್ರಗಳಲ್ಲಿ ಯುವಕರಿಗೆ ಅನುಕೂಲ ಒದಗಿಸುವುದು ಈ ಮೇಳದ ಮುಖ್ಯ ಉದ್ದೇಶ ಎಂದರು.
ಈ ಮೇಳದಲ್ಲಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದವರು ಮಾತ್ರವಲ್ಲದೇ ಎಲ್ಲಾ ಕಡೆಯವರು ಭಾಗವಹಿಸಬಹುದು. ಉದ್ಯೋಗಾಕಾಂಕ್ಷಿಗಳಿಗೆ ಉಟೋಪಚಾರ ಎಲ್ಲಾ ಸೌಲಭ್ಯವನ್ನು ಒದಗಿಸಲಾಗುವುದು. ಅಂಗವಿಕಲರಿಗೂ ಉದ್ಯೋಗ ಅವಕಾಶದ ಮಾಹಿತಿ ನೀಡಲಾಗುವುದು ಎಂದರು.
ಕೇವಲ ಓದಿದರೆ ಸಾಲದು, ಏನನ್ನೂ ಓದಬೇಕು, ಯಾಕೆ ಓದಬೇಕು ಮುಂತಾದವುಗಳ ಬಗ್ಗೆ ಕರಿಯರ್ ಕೌನ್ಸೆಲಿಂಗ್ ಮಾಡಲಾಗುವುದು. ಕೇವಲ ಓದಿದರೆ ಸಾಲದು. ಜ್ಞಾನ ಮತ್ತು ಬದುಕಿಗಾಗಿ ಓದಬೇಕು. ಪದವಿ ಇದ್ದರೂ ಕೌಶಲ್ಯ ಇಲ್ಲದಿದ್ದರೆ ಪ್ರಯೋಜನವಿಲ್ಲ. ಈ ಬಗ್ಗೆ ಅರಿವು ನೀಡಲಾಗುವುದು. ಉದ್ಯಮಿಯಾಗ ಬಯಸುವವರಿಗೂ ಈ ಮೇಳದಲ್ಲಿ ತಿಳಿವಳಿಕೆ ನೀಡಲಾಗುವುದು ಎಂದರು.



