ಬೆಂಗಳೂರು: ನಗರದಲ್ಲಿ ಕಸದ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಗುರಪ್ಪನಪಾಳ್ಯ ವಾರ್ಡ್‌ನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಬೇಸತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ವಾರ್ಡ್ ನಂ.171ರಲ್ಲಿ ವಾರಗಳಷ್ಟೇ ಅಲ್ಲ, ತಿಂಗಳುಗಳಾದರೂ ಕಸ ತೆರವುಗೊಳಿಸಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ರಸ್ತೆ ಬದಿಗಳಲ್ಲಿ ಕಸದ ರಾಶಿಗಳು ತುಂಬಿಕೊಂಡು ದುರ್ವಾಸನೆ ಬೀರುತ್ತಿದ್ದು, ಸ್ಥಳೀಯರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳೇ ಸ್ವತಃ ಮುಂದಾಗಿ ಜೆಸಿಬಿ ಹಾಗೂ ಲಾರಿಗಳನ್ನು ಕರೆಸಿ ಕಸ ತೆರವುಗೊಳಿಸಿದ ಘಟನೆ ನಡೆದಿದೆ. ಸಮಾಜಸೇವಕ ಮಾಸ್ತಿ ಜಾಕಿರ್ ಅಲಿ ತಮ್ಮ ಸ್ವಂತ ಖರ್ಚಿನಲ್ಲಿ ಈ ಕಾರ್ಯ ಕೈಗೊಂಡು ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.
“ನಾವು ಬೆಂಗಳೂರಲ್ಲೋ ಅಥವಾ ಕಸದೂರಲ್ಲೋ ವಾಸಿಸುತ್ತಿದ್ದೇವೋ ಗೊತ್ತಾಗುತ್ತಿಲ್ಲ” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಹಳೆ ಗುರಪ್ಪನಪಾಳ್ಯ ವೃತ್ತದಲ್ಲಿ ನಿವಾಸಿಗಳು ಪ್ರತಿಭಟನೆ ನಡೆಸಿ, ಜಿಬಿಎ ಹಾಗೂ ಪಾಲಿಕೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಕಸದ ಸಮಸ್ಯೆಯಿಂದ ಉಂಟಾಗುತ್ತಿರುವ ಆರೋಗ್ಯ ಹಾನಿ ಹಾಗೂ ಅನಾನುಕೂಲಗಳನ್ನು ವಿವರಿಸಿ, ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಕಸವನ್ನು ನಿಯಮಿತವಾಗಿ ತೆರವುಗೊಳಿಸುವುದರ ಜೊತೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ. ನಗರದಲ್ಲಿ ಮೂಲಭೂತ ಸಮಸ್ಯೆಗಳಿಗೂ ಜನರೇ ಮುಂದಾಗಿ ಪರಿಹಾರ ಕಂಡುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿರುವುದು ವಿಷಾದಕರ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.



