ಬೇಸಿಗೆಯ ಉಷ್ಣತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೇಹ ಹೈಡ್ರೇಟ್ ಆಗಿರುವುದು ಅತ್ಯಂತ ಮುಖ್ಯವಾಗಿದೆ. ಆದರೆ ಈ ಸಮಯದಲ್ಲಿ ಯಾವ ರೀತಿಯ ನೀರು ಕುಡಿಯಬೇಕು ಎಂಬುದರ ಬಗ್ಗೆ ಆರೋಗ್ಯ ತಜ್ಞರು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.
ತಜ್ಞರ ಪ್ರಕಾರ, ತಣ್ಣೀರು ತಕ್ಷಣ ತಂಪು ನೀಡಿದರೂ ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಜೀರ್ಣಕ್ರಿಯೆಗೆ ತೊಂದರೆ ಉಂಟುಮಾಡಬಹುದು. ವಿಶೇಷವಾಗಿ ಊಟದ ನಂತರ ತಣ್ಣೀರು ಕುಡಿದರೆ ಆಹಾರ ಸರಿಯಾಗಿ ಜೀರ್ಣವಾಗದೆ ಅಜೀರ್ಣ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಇದಕ್ಕೆ ವಿರುದ್ಧವಾಗಿ, ಬಿಸಿ ಅಥವಾ ಉಗುರು ಬೆಚ್ಚಗಿನ ನೀರು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಕಾರಿಯಾಗಿದೆ. ಇದು ರಕ್ತಸಂಚಾರವನ್ನು ಹೆಚ್ಚಿಸಿ ದೇಹದ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಬೆಳಿಗ್ಗೆ ಬೆಚ್ಚಗಿನ ನೀರು ಕುಡಿಯುವುದು ಮೆಟಾಬಾಲಿಸಂ ಹೆಚ್ಚಿಸಲು ಸಹಕಾರಿ ಎಂದು ತಜ್ಞರು ತಿಳಿಸಿದ್ದಾರೆ.
ಆದರೆ, ಬೇಸಿಗೆಯಲ್ಲಿ ತುಂಬಾ ಬಿಸಿ ಅಥವಾ ತುಂಬಾ ತಣ್ಣೀರು ಬದಲು ಸಾಮಾನ್ಯ ತಾಪಮಾನದಲ್ಲಿರುವ ನೀರನ್ನು ಕುಡಿಯುವುದು ಅತ್ಯುತ್ತಮ ಆಯ್ಕೆ ಎಂದು ತಜ್ಞರು ಹೇಳಿದ್ದಾರೆ. ಇದು ದೇಹದ ಸಮತೋಲನವನ್ನು ಕಾಪಾಡಿ ಜೀರ್ಣಕ್ರಿಯೆಯ ಮೇಲೂ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ.
ದೇಹದಲ್ಲಿ ನೀರಿನ ಕೊರತೆ ತಪ್ಪಿಸಲು ದಿನಕ್ಕೆ ಕನಿಷ್ಠ 2.5 ರಿಂದ 3 ಲೀಟರ್ ನೀರು ಕುಡಿಯಬೇಕು. ಹೆಚ್ಚು ಬೆವರು ಬರುವವರು ಇನ್ನಷ್ಟು ನೀರು ಸೇವಿಸುವುದು ಅಗತ್ಯ. ಜೊತೆಗೆ ಹಣ್ಣಿನ ರಸ, ಜ್ಯೂಸ್ ಹಾಗೂ ಎಳನೀರು ಸೇವಿಸುವುದೂ ಆರೋಗ್ಯಕ್ಕೆ ಲಾಭಕರವಾಗಿದೆ.



