ನವದೆಹಲಿ: ಭಾರತದಲ್ಲಿ ಮುಂದಿನ ದಿನಗಳಲ್ಲಿ ಉಷ್ಣ ಅಲೆ ಪರಿಸ್ಥಿತಿ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಐಎಂಡಿ ಪ್ರಕಾರ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಏಪ್ರಿಲ್ 17ರ ವೇಳೆಗೆ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆ ಇದೆ. ಏಪ್ರಿಲ್ 18ರವರೆಗೆ ವಾಯುವ್ಯ ಭಾರತದಲ್ಲಿ ತಾಪಮಾನವು 4ರಿಂದ 6 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ನಿರೀಕ್ಷೆಯಿದೆ.
ಮಧ್ಯಪ್ರದೇಶ, ವಿದರ್ಭ ಮತ್ತು ಛತ್ತೀಸ್‌ಗಢ ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿ 3ರಿಂದ 5 ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ. ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿಯೂ 2ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗುವ ಸಾಧ್ಯತೆ ವ್ಯಕ್ತವಾಗಿದೆ.
ಒಡಿಶಾ, ಕರಾವಳಿ ಆಂಧ್ರಪ್ರದೇಶ, ಗುಜರಾತ್ ಸೇರಿದಂತೆ ಹಲವು ಭಾಗಗಳಲ್ಲಿ ಮುಂದಿನ ಒಂದು ವಾರ ಬಿಸಿಲಿನ ವಾತಾವರಣ ಮುಂದುವರಿಯುವ ನಿರೀಕ್ಷೆಯಿದೆ. ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಹಾಗೂ ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಕಂಡುಬರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಇತ್ತ ಈಶಾನ್ಯ ಭಾರತದಲ್ಲಿ ಭಿನ್ನ ಹವಾಮಾನ ಪರಿಸ್ಥಿತಿ ಕಂಡುಬರಲಿದ್ದು, ಅಸ್ಸಾಂ ಮತ್ತು ಮೇಘಾಲಯದಲ್ಲಿ ಗುಡುಗು ಸಹಿತ ಗಾಳಿ-ಮಳೆಯ ಸಾಧ್ಯತೆ ಇದೆ. ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯೂ ಇದೆ ಎಂದು ಐಎಂಡಿ ತಿಳಿಸಿದೆ.
ಕರ್ನಾಟಕ, ಕೇರಳ ಮತ್ತು ಕರಾವಳಿ ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಉಷ್ಣ ಅಲೆ ತೀವ್ರಗೊಳ್ಳುವ ಸಾಧ್ಯತೆ ಇದ್ದು, ಜನರು ಎಚ್ಚರಿಕೆಯಿಂದ ಇರಲು ಹವಾಮಾನ ಇಲಾಖೆ ಸಲಹೆ ನೀಡಿದೆ.



