ಕೊಪ್ಪಳ: ಜಿಲ್ಲೆಯಲ್ಲಿ ಕೇಳಿಬಂದಿರುವ ಲವ್ ಜಿಹಾದ್ ಆರೋಪ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ.
ಪ್ರಕರಣದಲ್ಲಿ ಆರೋಪಿ ಮುಸ್ತಫಾ ಖಾದ್ರಿಗೆ ಅಂತರಾಜ್ಯ ಸಂಪರ್ಕವಿದ್ದು, ಆರ್ಥಿಕ ಸಹಾಯ ಪಡೆದಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮೂಲಗಳ ಪ್ರಕಾರ, ಮುಸ್ತಫಾಗೆ ಗೋವಾ ಮತ್ತು ಮುಂಬೈ ಮೂಲದ ಕೆಲವರ ಸಂಪರ್ಕವಿದ್ದು, ಅಲ್ಲಿ ಹಣಕಾಸಿನ ನೆರವು ದೊರೆಯುತ್ತಿತ್ತು ಎನ್ನಲಾಗಿದೆ. ಈ ಹಣದಿಂದಲೇ ಕೊಪ್ಪಳದಲ್ಲಿ ವೈಭವಯುತ ಜೀವನ ನಡೆಸುತ್ತಿದ್ದಾನೆ ಎಂದು ಹೇಳಲಾಗಿದೆ. ಇದೇ ಹಣವನ್ನು ಬಳಸಿ ಯುವತಿಯರೊಂದಿಗೆ ಸಂಪರ್ಕ ಬೆಳೆಸುತ್ತಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.
ತನಿಖೆ ವೇಳೆ ಮುಸ್ತಫಾ ಖಾದ್ರಿಯ ಮೊಬೈಲ್‌ನಲ್ಲಿ ಸುಮಾರು 9,700 ವಿಡಿಯೋಗಳು ಮತ್ತು 7,000ಕ್ಕೂ ಹೆಚ್ಚು ಫೋಟೋಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ವಿಡಿಯೋಗಳನ್ನು ಇತರರಿಗೆ ರವಾನಿಸಿರುವ ಸಾಧ್ಯತೆ ಇದ್ದು, ಈ ಹಿನ್ನೆಲೆ ಮುಸ್ತಫಾ ವಿರುದ್ಧ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಇದೇ ವೇಳೆ, ಮುಸ್ತಫಾನನ್ನು ಪ್ರೀತಿಸುತ್ತಿದ್ದ ಯುವತಿಯೂ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದಾಳೆ. ಮೆಡಿಕಲ್ ಕಾಲೇಜಿನ ವಾಟರ್ ಟ್ಯಾಂಕ್ ಬಳಿ ಊಟ ಮಾಡುತ್ತಿದ್ದ ವೇಳೆ 8ರಿಂದ 10 ಮಂದಿ ಅಪರಿಚಿತರು ಬಂದು ಮುಸ್ತಫಾಗೆ ಜೀವ ಬೆದರಿಕೆ ಹಾಕಿ, ಅವನ ಬಳಿ ಇದ್ದ ಎರಡು ಮೊಬೈಲ್‌ಗಳನ್ನು ಕಸಿದುಕೊಂಡು ಹಿಂತಿರುಗಿಸಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದು, ಸಂಪೂರ್ಣ ಸತ್ಯಾಸತ್ಯತೆ ಹೊರಬರುವಂತೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



