ಪ್ರಚೋದನಾತ್ಮಕ ಹೇಳಿಕೆಗಳ ಮೂಲಕ ನಿರಂತರವಾಗಿ ಸುದ್ದಿಯಲ್ಲಿರುವ ಪ್ರಕಾಶ್ ರಾಜ್ ಇದೀಗ ಮತ್ತೊಮ್ಮೆ ಕಾನೂನು ವಿವಾದಕ್ಕೆ ಸಿಲುಕಿರುವಂತೆ ಕಾಣುತ್ತಿದೆ. ರಾಮಾಯಣದ ಕಥನವನ್ನು ವಿಭಿನ್ನ ದೃಷ್ಟಿಕೋನದಿಂದ ವಿವರಿಸಿದ ಅವರ ಮಾತುಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಪ್ರತಿಕ್ರಿಯೆ ಹುಟ್ಟುಹಾಕಿವೆ.
ವೇದಿಕೆ ಮೇಲಿನ ಭಾಷಣದಲ್ಲಿ, ಅವರು ರಾಮ ಮತ್ತು ರಾವಣರನ್ನು ಪ್ರಾದೇಶಿಕವಾಗಿ ವಿಭಜಿಸಿ ಹೇಳಿಕೆ ನೀಡಿರುವುದು ವಿವಾದದ ಮೂಲವಾಗಿದೆ. ದಕ್ಷಿಣ ಭಾರತದ ಸಂಸ್ಕೃತಿ ಮತ್ತು ಭಾಷಾ ವಿಚಾರವನ್ನು ಉಲ್ಲೇಖಿಸಿ, ಉತ್ತರ ಭಾರತದ ಪ್ರಭಾವದ ವಿರುದ್ಧ ತಮ್ಮ ಅಭಿಪ್ರಾಯವನ್ನು ತೀವ್ರವಾಗಿ ವ್ಯಕ್ತಪಡಿಸಿದ್ದಾರೆ.
ಪ್ರಕಾಶ್ ರಾಜ್ ಹೇಳಿದ್ದೇನು?
ರಾಮ, ಲಕ್ಷ್ಮಣ ಹಾಗೂ ಸೀತೆ ದಕ್ಷಿಣ ಭಾರತಕ್ಕೆ ಬರುತ್ತಾರೆ. ಬಂದಾಗ ಲಕ್ಷ್ಮಣನಿಗೆ ಹಸಿವಾಗಿರುತ್ತದೆ. ಅಲ್ಲಿ ಹಣ್ಣಿನ ತೋಟ ಒಂದಿರುತ್ತದೆ. ಹೋಗಿ ಹಣ್ಣನ್ನು ತಿನ್ನೋಣ ಎಂದು ಲಕ್ಷ್ಮಣ ಹೇಳುತ್ತಾನೆ. ಎಲ್ಲರೂ ಹಣ್ಣು ತಿನ್ನುತ್ತಾರೆ. ಅಲ್ಲಿಗೆ ಬರುವ ಶೂರ್ಪನಖ, ಅಣ್ಣ ರಾವಣ ಯಾರೋ ಹಣ್ಣನ್ನು ತಿನ್ನುತ್ತಿದ್ದಾರೆ ಎನ್ನುತ್ತಾಳೆ. ಆಗ ರಾವಣ, ಅವರಿಗೆ ಹಸಿವಾಗಿದೆ ತಿನ್ನಲಿ ಎನ್ನುತ್ತಾನೆ’ ಎಂದು ಕಥೆ ಆರಂಭಿಸಿದ್ದಾರೆ ಪ್ರಕಾಶ್ ರಾಜ್.
‘ಆ ಬಳಿಕ ರಾವಣ ಹಣ ಕೇಳುತ್ತಾನೆ. ರಾಮ ಇಲ್ಲ ಎನ್ನುತ್ತಾನೆ. 20 ಪರ್ಸೆಂಟ್ ಡಿಸ್ಕೌಂಟ್ ಕೊಡ್ತೀನಿ ಎಂದು ರಾವಣ ಹೇಳುತ್ತಾನೆ. ಹಣವೇ ಇಲ್ಲ ಎಂದಮೇಲೆ ಡಿಸ್ಕೌಂಟ್ ಕೊಟ್ಟು ಏನು ಪ್ರಯೋಜನ? ಅದೇ ರೀತಿ, ಹಿಂದಿ ಹೇರಿಕೆ ಮಾಡಬೇಡಿ. ಇಲ್ಲಿ ಬಂದು ನೀವು ಮಲಯಾಳಂ ಕಲಿಯಿರಿ. ನಾವು ಬೀಫ್ ಫೆಸ್ಟ್ ಮಾಡುತ್ತೇವೆ’ ಎಂದಿದ್ದಾರೆ ಪ್ರಕಾಶ್ ರಾಜ್. ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಾಗಿದೆ ಎಂದು ಹೇಳಲಾಗಿದೆ.



