ಕಲಬುರಗಿ: ರಸ್ತೆ ಅಪಘಾತದಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಗೊಬ್ಬೂರ್ (ಬಿ) ಗ್ರಾಮದ ಬಳಿ ನಡೆದಿದೆ.
ಮೃತರನ್ನು ಧರೆಪ್ಪ ಅಂಜುಟಗಿ (26) ಎಂದು ಗುರುತಿಸಲಾಗಿದೆ. ಅವರು ಕೆಎಸ್‌ಆರ್‌ಪಿ (KSRP) ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಧರೆಪ್ಪ ಕಲಬುರಗಿಯಿಂದ ಶಿರವಾಳ್ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಗೊಬ್ಬೂರ್ (ಬಿ) ಗ್ರಾಮದ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಡಿಕ್ಕಿಯ ಪರಿಣಾಮ ಗಂಭೀರವಾಗಿ ಗಾಯಗೊಂಡ ಧರೆಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಳಿಕ ವಾಹನ ಚಾಲಕ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಘಟನೆ ನಡೆದ ಸ್ಥಳಕ್ಕೆ ಡಿವೈಎಸ್‌ಪಿ ತಮ್ಮರಾಯ ಪಾಟೀಲ್ ಹಾಗೂ ಸಿಪಿಐ ಲಖನ್ ಮಸಗಪ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಶವಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಕುರಿತು ದೇವಲ ಗಾಣಗಾಪೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪರಿಚಿತ ವಾಹನ ಹಾಗೂ ಚಾಲಕನ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.



